ಪ್ರಶಸ್ತಿ, ಪುರಸ್ಕಾರಗಳು ಉಳ್ಳವರ ಪಾಲಾಗುತ್ತಿವೆ: ಸಂತೋಷ್ ಹೆಗ್ಡೆ
ಬೆಂಗಳೂರು, ಮಾ.10: ಪ್ರಶಸ್ತಿ, ಪುರಸ್ಕಾರಗಳು ಅಧಿಕಾರ ಉಳ್ಳವರ ಪಾಲಾಗುತ್ತಿದು, ಇದರಿಂದ ಪ್ರಶಸ್ತಿಗಳ ಮೇಲಿನ ಗೌರವ ದಿನೆ ದಿನೇ ಕಡಿಮೆಯಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಂಗಣದಲ್ಲಿ ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಯೋಜಿಸಿದ್ದ, ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಪ್ರಗತಿಗೆ ಮಹನೀಯರು ತಮ್ಮ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ, ಅಂತಹವರಿಗೆ ಪ್ರಶಸ್ತಿಗಳು ತಲುಪುತ್ತಿಲ್ಲ. ಲಾಬಿ ಮಾಡಿದವರಿಗೆ ಪ್ರಶಸ್ತಿಗಳು ಸುಲಭವಾಗಿ ಸಿಗುತ್ತಿವೆ. ಇಂತಹ ಕೆಟ್ಟ ವ್ಯವಸ್ಥೆ ಬದಲಾಗಬೇಕು. ಇದರ ವಿರುದ್ಧ ಮಾತನಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ ಧನಲಕ್ಷ್ಮಿ ಉನ್ನಿ ಕೃಷ್ಣನ್ ಮಾತನಾಡಿ, ಪುತ್ರ ಸಂದೀಪ್ ಹುತಾತ್ಮನಾದ ಬಳಿಕ ಈ ದೇಶವನ್ನೇ ಬಿಟ್ಟು ಹೋಗಬೇಕು ಎಂದು ಅನಿಸಿತು. ಆದರೆ, ಆ ತೀರ್ಮಾನ ಬದಲಿಸಿ, ಅವನನ್ನು ಪ್ರೀತಿಸುವ ಈ ಜನರಲ್ಲೇ ನನ್ನ ಮಗನನ್ನು ಕಂಡುಕೊಂಡೇ ಎಂದು ಹೇಳಿ ಕಣ್ಣೀರು ಹಾಕಿದರು.
ವಿಶ್ವ ಪ್ಯಾರಾ ಅಥ್ಲೆಟಿಕ್ ಕ್ರೀಡಾಪಟು ಡಾ.ಮಾಲತಿ ಹೊಳ್ಳ ಮಾತನಾಡಿ, ಸಾಧನೆಗೆ ಅಂಗ ವೈಫಲ್ಯತೆ ಅಡ್ಡಿಯಾಗದು. ನಮ್ಮ ದೇಹ ರಚನೆ ನಮಗೆ ದೇವರು ಕೊಟ್ಟ ವರ ಎಂದು ತಿಳಿದು ಸಾಧನೆಗೈಯಬೇಕು ಎಂದ ಅವರು, ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇತರರಿಗೆ ಮಾದರಿಯಾಗುವಂತೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವತ್ತಕ್ಕೂ ಹೆಚ್ಚು ಸಾಧಕಿಯರನ್ನು ಸನ್ಮಾನಿಸಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷ ಶರವಣ ಲಕ್ಷ್ಮಣ್, ಪರ್ತಕರ್ತ ಗಣೇಶ್ ಕಾಸರಗೋಡು ಸೇರಿ ಪ್ರಮುಖರಿದ್ದರು.