ಬೆಂಗಳೂರು: ಗೊಲ್ಲ ಸಮುದಾಯಕ್ಕೆ ರಾಜ್ಯಸಭಾ ಟಿಕೆಟ್ ನೀಡಲು ಆಗ್ರಹಿಸಿ ಪ್ರತಿಭಟನೆ
ಬೆಂಗಳೂರು, ಮಾ.10: ಯಾದವ(ಗೊಲ್ಲ) ಸಮುದಾಯಕ್ಕೆ ಈ ಬಾರಿ ರಾಜ್ಯ ಸಭಾ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಯುವ ಯಾದವ ಮಹಾಸಭಾದ ಸದಸ್ಯರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ರಾಜಕೀಯದಿಂದ ವಂಚಿತವಾಗಿರುವ ಗೊಲ್ಲ ಸಮುದಾಯಕ್ಕೆ, ಈ ಬಾರಿ ರಾಜ್ಯಸಭಾ ಟಿಕೆಟ್ ನೀಡಲು ಎಲ್ಲ ರಾಜಕೀಯ ಪಕ್ಷದವರು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಕರ್ನಾಟಕದಲ್ಲಿ ಗೊಲ್ಲ ಸಮುದಾಯದವರು 35 ಲಕ್ಷ ಜನಸಂಖ್ಯೆ ಇದ್ದು, ಸಾಮಾಜಿಕ, ರಾಜಕೀಯವಾಗಿ ಶೋಷಣೆಗೆ ಒಳಗಾಗಿದ್ದಾರೆ. ಇನ್ನು ಸಹ ಈ ಸಮುದಾಯದ ಶಾಸಕರಾಗಲಿ, ಸಂಸದರಾಗಲಿ ಆಯ್ಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದೇ ರೀತಿ, ವಿಧಾನಸಭಾ ಚುನಾವಣೆಯಲ್ಲೂ ಎಲ್ಲ ಪಕ್ಷದವರು ಟಿಕೆಟ್ ನೀಡಬೇಕು ಹಾಗೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ, ಕಾಡು ಗೊಲ್ಲರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾ ಮುಖಂಡರಾದ ಪಿ.ಗಾದೆಪ್ಪ, ವೆಂಕಟರಮಣ, ಆನಂದರಾಜ್ ಸೇರಿ ಪ್ರಮುಖರಿದ್ದರು.