×
Ad

ವೈದ್ಯಕೀಯ ಪದವಿ ಶುಲ್ಕ ಹೆಚ್ಚಳಕ್ಕೆ ಎಐಡಿಎಸ್‌ಓ ಖಂಡನೆ

Update: 2018-03-10 19:01 IST

ಬೆಂಗಳೂರು, ಮಾ. 10: ಕಾಮೆಡ್-ಕೆ ಲಾಬಿಗೆ ಮಣಿಯುತ್ತಿರುವ ಸರಕಾರ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಶೇ.15ರಷ್ಟು ಹೆಚ್ಚಳ ಮಾಡುವ ಮೂಲಕ ಶಾಕ್ ನೀಡಿದ್ದು, ಬಡ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತೆ ಮಾಡಿದೆ ಎಂದು ಎಐಡಿಎಸ್‌ಓ ಖಂಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಸೀಟುಗಳಿಗೆ 5.06ಲಕ್ಷ ರೂ.ಪಾವತಿಸಬೇಕಾಗಿದ್ದು, ದಂತ ವೈದ್ಯಕೀಯ ಕೋರ್ಸಿಗೆ 2.58 ಲಕ್ಷ ರೂ.ಭರಿಸಬೇಕಾಗಿದ್ದು, ಇದು ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ ಎಂದು ಆರೋಪಿಸಲಾಗಿದೆ.

ಕಾಮೆಡ್-ಕೆ ಸರಕಾರವನ್ನು ಬೆದರಿಸುತ್ತ, ಸೀಟು ಹಂಚಿಕೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ. ಅಲ್ಲದೆ, ಶುಲ್ಕವನ್ನೂ ಹೆಚ್ಚಿಸಿಕೊಳ್ಳುತ್ತಿದೆ. ಕಾಮೆಡ್-ಕೆ ಈ ಪುಂಡಾಟವನ್ನು ತಡೆಯುವ ಬದಲು, ಸರಕಾರವು ಪ್ರತಿಬಾರಿ ಅವರ ಬೇಡಿಕೆಗೆ ಮಣಿಯುತ್ತಿರುವುದನ್ನು ನೋಡಿದರೆ, ಸರಕಾರವನ್ನು ಕಾಮೆಡ್-ಕೆ ನಡೆಸುತ್ತಿರುವಂತೆ ಭಾಸವಾಗುತ್ತದೆ ಎಂದು ಲೇವಡಿ ಮಾಡಲಾಗಿದೆ.

ರಾಜಕೀಯ ಪಕ್ಷಗಳಿಗೆ ಸೇರಿದ ಹಲವು ನಾಯಕರು ತಮ್ಮದೆ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು, ಹಲವರು ಸ್ವತಃ ತಾವೇ ಕಾಮೆಡ್-ಕೆಯನ್ನು ಪ್ರತಿನಿಧಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಇವರು ಜನಪರವಾದ ನಿಲುವನ್ನು ತಳೆದು, ಲಾಭಕೋರ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕುತ್ತಾರೆಂಬುದು ಕೇವಲ ಭ್ರಮೆಯಷ್ಟೇ ಎಂದು ಟೀಕಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಬಿಗೆ ಕಡಿವಾಣ ಹಾಕಿ, ವೈದ್ಯಕೀಯ ಶಿಕ್ಷಣವು ಎಲ್ಲ ವರ್ಗದ ವಿದ್ಯಾರ್ಥಿಗಳ ಕೈಗೆಟುಕುವಂತೆ ಮಾಡುವ ಶಾಸನವೊಂದನ್ನು ಈ ಕೂಡಲೇ ಜಾರಿಗೆ ತರಬೇಕೆಂದು ಎಐಡಿಎಸ್‌ಓ ಅಧ್ಯಕ್ಷ ಡಾ.ಎನ್. ಪ್ರಮೋದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News