ಸರ್ವರಿಗೂ ಸಮಬಾಳು ಸರ್ಕಾರದ ಗುರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ. 11: ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2017-18 ಆಯವ್ಯದಲ್ಲಿ ಭರವಸೆ ನೀಡಿದಂತೆ 500 ಅಲ್ಪ ಸಂಖ್ಯಾತರಿಗೆ ವಾಹನ ಖರೀದಿಗಾಗಿ ತಲಾ 3 ಲಕ್ಷ ಸಹಾಯಧನ ನೀಡುವ ಭರವಸೆಯಂತೆ ಈಗಾಗಲೇ ರಾಜ್ಯದಲ್ಲಿ ವಿತರಿಸಲಾಗಿದ್ದು, ಬೆಂಗಳೂರು ಭಾಗದಲ್ಲಿ ಇಂದು ನೂರು ವಾಹನಗಳನ್ನು ವಿತರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಇಂದು ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿ ಸಹಾಯಧನ ಯೋಜನೆಯನ್ನು ಫಲಾನುಭವಿಗಳಿಗೆ ವಿತರಿಸಿ, ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪ ಸಂಖ್ಯಾತರಲ್ಲಿ ಅನಕ್ಷರತೆ ಹೆಚ್ಚಿದ್ದು, ಅವರು ಸಹ ಉತ್ತಮ ಜೀವನ ನೆಡೆಸುವುದಕ್ಕಾಗಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೂರು ಲಕ್ಷ ರೂ. ಸಹಾಯ ಧನ ಹಾಗೂ ಉಳಿದಿದ್ದನ್ನು ಬ್ಯಾಂಕ್ ಗಳಿಂದ ಸಾಲದ ರೂಪದಲ್ಲಿ ಧನ ಸಹಾಯ ಒದಗಿಸಲಾಗುತ್ತಿದೆ.
ಸರ್ವರಿಗೂ ಸಮಬಾಳು ಗುರಿಯೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ವಾಹನಗಳನ್ನು ನೀಡುವುದಾಗಿ ಈ ಸಂದರ್ಭ ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಚ್.ಎಮ್.ರೇವಣ್ಣ, ತನ್ವೀರ್ ಸೇಠ್, ರೋಷನ್ ಬೇಗ್, ವಿಧಾನಪರಿಷತ್ ಸದಸ್ಯರಾದ ರಿಝ್ವಾನ್ ಹರ್ಷದ್, ಸಲಿಂ ಅಹ್ಮದ್, ಶಾಸಕ ಜಮೀರ್ ಅಹ್ಮದ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್, ವ್ಯವಸ್ಥಾಪಕ ನಿರ್ದೇಶಕ ಇಸ್ಲಾವುದ್ದೀನ್ ಜೆ.ಗದ್ಯಾಳ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.