ಬೆಂಗಳೂರು: ಮಣ್ಣಿನ ದಿಬ್ಬ ಕುಸಿದು ಇಬ್ಬರು ಕಾರ್ಮಿಕರು ಮೃತ್ಯು
ಬೆಂಗಳೂರು, ಮಾ.11: ಮಣ್ಣಿನ ದಿಬ್ಬ ಕುಸಿದು ಕೂಲಿ ಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರಪ್ರದೇಶದ ಮೂಲದ ಸಂದೀಪ್(20) ಮತ್ತು ಅಖಿಲೇಶ್ ಯಾದವ್ (21) ಮೃತಪಟ್ಟಿರುವ ಕೂಲಿ ಕಾರ್ಮಿಕರು ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆ ವಿವರ: ನಗರದ ಇಮ್ಮಡಿ ಹಳ್ಳಿಯಲ್ಲಿ ಕೆಸಿ ವ್ಯಾಲಿ ಎಂಬ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆಂದು ಮಣ್ಣು ತೆಗೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಹಾಗೂ ಇಂಜಿನಿಯರ್ ಅದರೊಳಗೆ ಸಿಲುಕಿದ್ದಾರೆ. ಮೇಲಿದ್ದ ಕೂಲಿ ಕಾರ್ಮಿಕರು ರಕ್ಷಣೆಗಾಗಿ ಕೂಗಿಕೊಂಡು ಮಣ್ಣು ತೆರವುಗೊಳಿಸುವಷ್ಟರಲ್ಲಿ ಅದರಲ್ಲಿ ಸಿಲುಕಿದ್ದ ಸಂದೀಪ್ ಹಾಗೂ ಅಖಿಲೇಶ್ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸ್ಥಳದಲ್ಲಿದ್ದ ಇಂಜಿನಿಯರ್ ಉಮಾಶಂಕರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆಯುತ್ತಿದ್ದಂತೆ ಕಾರ್ಮಿಕರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಹೆಚ್ಚು ಆಳವಾಗಿ ಗುಂಡಿ ಅಗೆಯುತ್ತಿದ್ದಾಗ ಮೇಲಿನಿಂದ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ. ಘಟನೆ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.