ಸೋಲಿಗೆ ಹಿಂಜರಿಯದೆ ಗುರಿಯತ್ತ ಮುನ್ನುಗ್ಗಿ: ಕವಿರಾಜ್

Update: 2018-03-11 12:07 GMT

ಬೆಂಗಳೂರು, ಮಾ. 11: ಯುವಜನರು ಸೋಲಿಗೆ ಹಿಂಜರಿಯದೆ ಏನನ್ನಾದರೂ ಸಾಧಿಸುವ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಚಿತ್ರ ಸಾಹಿತಿ ಕವಿರಾಜ್ ವಿದ್ಯಾರ್ಥಿಗಳಿಗೆ ಇಂದಿಲ್ಲಿ ಕಿವಿಮಾತು ಹೇಳಿದ್ದಾರೆ.

ರವಿವಾರ ಇಲ್ಲಿನ ಕೆ.ಆರ್.ಪುರದಲ್ಲಿನ ಕೇಂಬ್ರಿಡ್ಜ್ ತಾಂತ್ರಿಕ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಚಿಗುರು-2018 ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದುಕಿನಲ್ಲಿ ಏರಿಳಿತಗಳು ಸಹಜ. ಅವುಗಳಿಗೆ ತಲೆಕೆಡಿಸಿಕೊಳ್ಳದೆ ತಾವು ಇಚ್ಚಿಸಿರುವ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರತಿಭೆಯ ಅನಾವರಣ ಮಾಡುತ್ತಾ ಸಾಧನೆಗೈಯ್ಯಬೇಕು ಎಂದು ಸಲಹೆ ನೀಡಿದರು.

ಶಿಕ್ಷಣದ ಜೊತೆಯಲ್ಲಿ ಚಿತ್ರಕಲೆ, ಸಾಹಿತ್ಯ, ನೃತ್ಯ, ನಟನೆ ಸೇರಿದಂತೆ ಇತರೆ ಕಲಾ ಕ್ಷೇತ್ರಗಳಲ್ಲಿ ಪ್ರವೃತ್ತಿ ಬೆಳೆಸಿಕೊಂಡು ಪರಿಣಿತಿ ಪಡೆದು ಸಫಲತೆ ಕಾಣಬಹುದು ಎಂದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ವಿದೇಶಗಳಲ್ಲೂ ಶಿಕ್ಷಣ, ಉದ್ಯೋಗ ಮಾಡುವ ಸಾಧ್ಯತೆಗಳು ಹೆಚ್ಚಿವೆ ಎಂದರು.

ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್, ಐಐಎಂ ಎಚ್‌ಆರ್ ವ್ಯವಸ್ಥಾಪಕ ಶಿವಕುಮಾರ್, ನಟ ಶರತ್ ಲೋಹಿತಾಶ್ವ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು, ಪ್ರಾಂಶುಪಾಲ ಡಾ.ಎಲ್.ಸುರೇಶ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News