ದೇಶದಲ್ಲಿ ಪುಡಾರಿ ಭಾಷೆ ವಿಜೃಂಭಿಸುತ್ತಿದೆ :ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಮಾ. 11: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪುಡಾರಿ ಮತ್ತು ಪುಂಡ ಭಾಷೆ ವಿಜೃಂಭಿಸುತ್ತಿದ್ದು, ಹಿಂಸೆ ಹಾಗೂ ಪುಡಾರಿತನ ಭಾಷೆ ಮತ್ತು ಭಾವವನ್ನು ಭ್ರಷ್ಟಗೊಳಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತಿಗಳು ಜವಾಬ್ದಾರಿ ಅರಿತು ಸೈದ್ಧಾಂತಿಕ ಸಾಹಿತ್ಯ ಕಟ್ಟುವ ಕೆಲಸ ಮಾಡಬೇಕೆಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಬಂಡಾಯ ಸಾಹಿತ್ಯ ನಲವತ್ತರ ಹೆಜ್ಜೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಭಾಷೆ ಪುಡಾರಿ ಭಾಷೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಬಂಡಾಯ, ಪ್ರಗತಿಪರ ಸಾಹಿತಿಗಳ ಮೇಲಿದೆ. ನಾಯಕ-ಖಳ ನಾಯಕ ಎಂದು ವಿಂಗಡಿಸುವ ಬದಲಿಗೆ ಸೈದ್ಧಾಂತಿಕ ಸೌಹಾರ್ದತೆಯನ್ನು ಕಟ್ಟುವ ಕೆಲಸ ಮಾಡಬೇಕು. ಸಾಮಾನ್ಯ ಜನರಿಗಿರುವ ವಿವೇಕ ಎಲ್ಲರಲ್ಲಿಯೂ ಬರಬೇಕಿದೆ ಎಂದರು.
ಅಂತಾರಾಷ್ಟ್ರೀಯ ಅಗ್ರಹಾರಗಳಿಂದು ಆರ್ಥಿಕ, ಧಾರ್ಮಿಕ ಅಧಿಪತ್ಯ ಸಾಧಿಸುತ್ತಿವೆ. ಈ ವೇಳೆ ನಾವು ಹೇಗೆ ನಮ್ಮನ್ನು ರಕ್ಷಿಸಿಕೊಳ್ಳಬೇಕು ಹಾಗೂ ಸಮರ್ಥಿಸಿಕೊಳ್ಳಬೇಕು ಎನ್ನುವುದರ ಕುರಿತು ಚಿಂತನೆ ಮಾಡುವ ಅಗತ್ಯವಿದೆ. ಶೋಷಿತ ಸಮುದಾಯಗಳು ನಿರ್ಮಾಣವಾಗುತ್ತಿರುವ ಶ್ರೇಣೀಕರಣಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದ ಅವರು, ರಾಜಕೀಯ ಪಕ್ಷಗಳಿಗೆ ರಾಷ್ಟ್ರೀಯ ಪ್ರಜ್ಞೆ ಇರಬೇಕೆಂದರು.
ಮುತ್ಸದ್ಧಿತನ ಬೇಕು: ಪಕ್ಷದೊಳಗಿದ್ದೂ ಪಕ್ಷ ಮೀರುವ, ಜಾತಿಯೊಳಗಿದ್ದೂ ಜಾತಿ ಮೀರುವ, ಧರ್ಮದೊಳಗಿದ್ದೂ ಧರ್ಮ ಮೀರುವ, ಪಂಥದೊಳಗಿದ್ದೂ ಪಂಥವನ್ನು ಮೀರುವ, ಸಂಕುಚಿತ ನೆಲೆಗಳನ್ನು ಮೀರುವ ಮುತ್ಸದ್ಧಿತನ ತೋರಬೇಕಿದೆ. ಸಾಮಾಜಿಕ ನಾಯಕತ್ವದ ಮೀರುವಿಕೆ ಅವಶ್ಯವಿದೆ. ನೆಲೆಗಳನ್ನು ಮೀರಬೇಕು, ಮುರಿಯಬಾರದು. ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳ ಅಂತರ್ ಸಂಬಂಧ ಬೆಳೆಸಬೇಕು. ಹಿನ್ನೋಟ ಮತ್ತು ಮುನ್ನೋಟಗಳನ್ನು ಒಂದುಗೂಡಿಸುವ ತಿಳಿವಳಿಕೆ ಎಲ್ಲರಿಗೂ ಅರ್ಥವಾದರೆ ಹುಸಿ ಕ್ರಾಂತಿಗಳು ನಡೆಯುವುದಿಲ್ಲ ಎಂದು ಹೇಳಿದರು.
20ನೆ ಶತಮಾನದ ಕೊನೆಯ ದಶಮಾನದಲ್ಲಿ ಭಾರತದಲ್ಲಿ ಧಾರ್ಮಿಕ ಹಾಗೂ ಆರ್ಥಿಕ ಮೂಲಭೂತ ವಿದೇಶಿ ಆರ್ಥಿಕತೆ ಹಾಗೂ ಜಾಗತೀಕರಣ ರೂಪದಲ್ಲಿ ಆರಂಭವಾಯಿತು. ಸುಧಾರಣೆ ಎಂದರೆ, ಆರ್ಥಿಕ ಸುಧಾರಣೆ ಎನ್ನುವ ಮೂಲಕ ಸುಧಾರಣೆಗೆ ಅರ್ಥ ಬದಲಾಯಿಸಲಾಯಿತು. ಧಾರ್ಮಿಕ ಮೂಲಭೂತವನ್ನು ರಾಷ್ಟ್ರೀಯ ಸಮಗ್ರತೆ ಎಂದು ಬಿಂಬಿಸುವ ಮೂಲಕ ವೈವಿಧ್ಯತೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಇಂತಹ ಸಂದರ್ಭದಲ್ಲಿ ಬಂಡಾಯ ಸಾಹಿತ್ಯವು ಸೈದ್ಧಾಂತಿಕ ಸೌಹಾರ್ದತೆ ಹುಟ್ಟುಹಾಕಬೇಕಿದೆ. ನಮ್ಮಲ್ಲಿಯೇ ಸೌಹಾರ್ದತೆ ಇಲ್ಲವಾದಲ್ಲಿ ಜಗತ್ತಿಗೆ ಸೌಹಾರ್ದತೆ ಸಾರಲು ಸಾಧ್ಯವಿಲ್ಲ. ಆದ್ದರಿಂದ ಜನ ಸಮುದಾಯದ ವಿವೇಕ ತಿಳಿಯಲು ಬಂಡಾಯ ಸಾಹಿತ್ಯ ಕೆಲಸ ಮಾಡಬೇಕಿದೆ. ಜಗತ್ತಿನಲ್ಲಿ ನಡೆದ ವಿವಿಧ ಕ್ರಾಂತಿಗಳನ್ನು ತಿಳಿಯುವುದಕ್ಕಾಗಿ ಟಾಲ್‌ಸ್ಟಾಯ್, ಕಾರ್ಲ್ ಮಾರ್ಕ್ಸ್ ಅವರನ್ನು ಓದಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ವ್ಯಕ್ತಿತ್ವ ವಿಘಟನೆ ಸವಾಲನ್ನು ಇಂದು ಸಂವೇದನಾಶೀಲರು ಎದುರಿಸುತ್ತಿದ್ದಾರೆ. ದಲಿತರ ಹೋರಾಟಗಳು ಪ್ರಬಲವಾಗಿದ್ದಾಗಲೇ ಈ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬೇಕು. ಶುದ್ಧ ಸಾಹಿತ್ಯ ಕಲ್ಪನೆ ಮೂಡಿಸಬೇಕು. ಎಡ-ಬಲ ವಾದಗಳನ್ನು ಸಂಯೋಜಿಸಿರುವುದು ಬಂಡಾಯ ಸಾಹಿತ್ಯ. ಹೀಗಾಗಿ, ಬಂಡಾಯ ಸಾಹಿತ್ಯವನ್ನು ಮತ್ತೆ ಕ್ರೀಯಾಶೀಲ ಗೊಳಿಸಬೇಕಿದೆ. ಮೊದಲು ಸಾಹಿತ್ಯ ಕುರಿತು ಸ್ಪಷ್ಟತೆ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಲಕ್ಷ್ಮಿನಾರಾಯಣ ನಾಗವಾರ, ಮೋಹನ್‌ರಾಜ್ ಉಪಸ್ಥಿತರಿದ್ದರು.