×
Ad

ರಾಜ್ಯಸಭೆ ಚುನಾವಣೆ: ಹನುಮಂತಯ್ಯ, ನಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ನಾಮಪತ್ರ ಸಲ್ಲಿಕೆ

Update: 2018-03-12 18:13 IST

-ಮಾ.13 ರಂದು ನಾಮಪತ್ರ ಪರಿಶೀಲನೆ

ಬೆಂಗಳೂರು, ಮಾ. 12: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಇದೇ ತಿಂಗಳ 23ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಡಾ.ಎಲ್.ಹನುಮಂತಯ್ಯ, ಡಾ. ಸೈಯದ್ ನಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ನಾಮಪತ್ರ ಸಲ್ಲಿಸಿದರು.

ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರೊಂದಿಗೆ ಆಗಮಿಸಿದ ರಾಜೀವ್ ಚಂದ್ರಶೇಖರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸೌಧದಲ್ಲಿ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಗೆಲುವಿಗೆ ಪೈಪೋಟಿ: ಈ ಮಧ್ಯೆಯೇ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಅವರೊಂದಿಗೆ ಆಗಮಿಸಿದ ಅಭ್ಯರ್ಥಿ ಬಿ.ಎಂ.ಫಾರೂಕ್ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಿದರು. ಇದರಿಂದ ನಾಲ್ಕನೇ ಅಭ್ಯರ್ಥಿ ಆಯ್ಕೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಸೃಷ್ಟಿಸಿದ್ದು, ಕುತೂಹಲ ಕೆರಳಿಸಿದೆ.
ನಾಮಪತ್ರ ಸಲ್ಲಿಕೆಗೆ ಮಾ.12 ಕೊನೆಯ ದಿನವಾಗಿದ್ದು, ಜೆಡಿಎಸ್-1, ಬಿಜೆಪಿ-1 ಹಾಗೂ ಕಾಂಗ್ರೆಸ್-3 ಸೇರಿದಂತೆ ಒಟ್ಟು 5 ಮಂದಿ ರಾಜ್ಯಸಭಾ ಚುನಾವಣಾ ಕಣದಲ್ಲಿದ್ದಾರೆ. ಮಾ.13 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾ.15ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

ರಾಜ್ಯಸಭೆ ಸದಸ್ಯರಾದ ಕೆ.ರೆಹ್ಮಾನ್‌ಖಾನ್, ರಾಜೀವ್ ಚಂದ್ರಶೇಖರ್, ಆರ್. ರಾಮಕೃಷ್ಣ ಹಾಗೂ ಬಸವರಾಜ ಪಾಟೀಲ್ ಅವರು ಎ.2ಕ್ಕೆ ನಿವೃತ್ತಿಯಾಗುತ್ತಿದ್ದು, ಇದರಿಂದ ತೆರವಾಗುವ 4 ಸ್ಥಾನಗಳಿಗೆ ಮಾ.23ರಂದು ಚುನಾವಣೆ ನಡೆಯಲಿದೆ. ಕಳೆದ ಬಾರಿ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಎಂ. ಫಾರೂಕ್ ಪರಾಭವಗೊಂಡಿದ್ದರು. ವಿಧಾನಸಭೆಯಲ್ಲಿ ಜೆಡಿಎಸ್‌ನ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆಯ 1 ಸ್ಥಾನ ಗೆಲ್ಲಲು ಕಷ್ಟಸಾಧ್ಯ.

ಅದೇ ರೀತಿ ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿ ಆಯ್ಕೆಗೆ ಬೇರೆ ಪಕ್ಷ ಅಥವಾ ಪಕ್ಷೇತರ ಶಾಸಕರ ಬೆಂಬಲ ಅನಿವಾರ್ಯ. ಹೀಗಾಗಿ ಪಕ್ಷೇತರ ಶಾಸಕರಿಗೆ ಎಲ್ಲಿಲ್ಲದ ಬೇಡಿಕೆಯನ್ನು ಈ ಚುನಾವಣೆ ಸೃಷ್ಟಿಸಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ 2 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಬಿಜೆಪಿಗೂ 1 ಸ್ಥಾನವನ್ನು ಗೆಲ್ಲಲು ಕಷ್ಟವಾಗುವುದಿಲ್ಲ.

ಮ್ಯಾಜಿಕ್ ನಂಬರ್‌ಗಾಗಿ ‘ರಾಜಕೀಯ ಲೆಕ್ಕಾಚಾರ’

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಎರಡೂ ಪಕ್ಷಗಳಿಗೆ ಅಗತ್ಯ ಸಂಖ್ಯಾಬಲ ಹೊಂದಿದ್ದು, ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಯಲ್ಲಿರುವುದರಿಂದ ಮ್ಯಾಜಿಕ್ ನಂಬರ್‌ಗಾಗಿ ಲೆಕ್ಕಾಚಾರ ಆರಂಭವಾಗಿದೆ.

ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಈಗ 217 ಆಗಿದ್ದು, ಶಾಸಕರಾದ ಖಮರುಲ್ಲಾ ಇಸ್ಲಾಂ, ಕೆ.ಎಸ್.ಪುಟ್ಟಣ್ಣಯ್ಯ, ಚಿಕ್ಕಮಾದು ನಿಧನ, ಆನಂದ್ ಸಿಂಗ್, ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್, ಹಾಲಾಡಿ ಶ್ರೀನಿವಾಸಶೆಟ್ಟಿ ಅವರ ರಾಜೀನಾಮೆಯಿಂದ ಒಟ್ಟು 7 ಸ್ಥಾನಗಳು ತೆರವಾಗಿವೆ.
ಉಳಿದ 217 ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ರಾಜ್ಯಸಭೆ ಪ್ರತಿಯೊಂದು ಸ್ಥಾನ ಗೆಲ್ಲಲು ಕನಿಷ್ಟ 45 ಶಾಸಕರ ಸಂಖ್ಯಾಬಲದ ಅಗತ್ಯವಿದೆ. ಕಾಂಗ್ರೆಸ್-122, ಬಿಜೆಪಿ-43 ಹಾಗೂ ಜೆಡಿಎಸ್-37 ಶಾಸಕರನ್ನು ಹೊಂದಿದೆ. ಬಿಜೆಪಿಯ 43 ಶಾಸಕರ ಜತೆ ಬಿಎಸ್‌ಆರ್ ಕಾಂಗ್ರೆಸಿನ ಪಿ.ರಾಜೀವ್, ಸಿ.ಪಿ. ಯೋಗೇಶ್ವರ್ ಬಿಜೆಪಿಯೊಂದಿಗಿದ್ದು, ಒಟ್ಟು 45 ಮತಗಳಾಗಲಿದ್ದು, ತನ್ನ ಅಭ್ಯರ್ಥಿ ಗೆಲುವು ನಿಶ್ಚಿತ.

ಕಾಂಗ್ರೆಸ್‌ನ ಒಟ್ಟು 122 ಶಾಸಕರ ಜತೆಗೆ 7 ಮಂದಿ ಜೆಡಿಎಸ್ ಬಂಡಾಯ ಶಾಸಕರು, ಪಕ್ಷೇತರ ಶಾಸಕರಾದ ಸತೀಶ್ ಶೈಲ್, ಮಾಂಕಾಳ ಸುಬ್ಬವೈದ್ಯ, ಸುಬ್ಬಾರೆಡ್ಡಿ, ಕೋಲಾರದ ಮಂಜುನಾಥ್, ಕೆಜೆಪಿಯ ಬಿ.ಆರ್. ಪಾಟೀಲ್, ಬಿಎಸ್‌ಆರ್ ಕಾಂಗ್ರೆಸ್‌ನ ನಾಗೇಂದ್ರ, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್ ಖೇಣಿ ಇದ್ದಾರೆ. ಕಾಂಗ್ರೆಸ್‌ಗೆ 136 ಸಂಖ್ಯಾಬಲವಿದ್ದು, 3 ಅಭ್ಯರ್ಥಿಗಳು ನಿರಾತಂಕವಾಗಿ ಗೆಲ್ಲಲಿದ್ದಾರೆ. ಆದರೂ, ಮತಗಳ ತಿರಸ್ಕಾರ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಒಂದೆರಡು ಹೆಚ್ಚುವರಿ ಮತಗಳನ್ನು ಹಾಕಿಸಲು ಕಾಂಗ್ರೆಸ್ ಪಕ್ಷ, ಜೆಡಿಎಸ್ ಬುಟ್ಟಿಗೆ ಕೈಹಾಕಿದೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಗೆಲುವಿಗೆ ಜೆಡಿಎಸ್‌ನ ಬಂಡಾಯ ಶಾಸಕರು ಸೇರಿ ಇನ್ನೂ 8 ಮತಗಳ ಅಗತ್ಯವಿದ್ದು, ಪಕ್ಷೇತರ ಶಾಸಕರ ಮನವೊಲಿಕೆ ಯತ್ನ ನಡೆಸಿದ್ದಾರೆ.

ಕೊನೆಯ ಕ್ಷಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ತಮ್ಮ ನಾಮಪತ್ರ ಹಿಂಪಡೆಯದಿದ್ದರೆ ಚುನಾವಣೆ ಅನಿವಾರ್ಯವಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಚುನಾವಣೆ ಭಾರೀ ನಿರೀಕ್ಷೆ ಮತ್ತು ಕುತೂಹಲವನ್ನು ಸೃಷ್ಟಿಸಿದೆ.

‘ಮೂರು ಅಭ್ಯರ್ಥಿಗಳ ಗೆಲುವಿಗೆ ಅಗತ್ಯವಿರುವ ಸಂಖ್ಯಾಬಲ ನಮ್ಮಲ್ಲಿದ್ದು, ಮೂವರು ನಿಶ್ಚಿತವಾಗಿ ಗೆಲುವು ಸಾಧಿಸಲಿದ್ದಾರೆ. ಜೆಡಿಎಸ್ ಬಂಡಾಯ ಶಾಸಕರು, ಪಕ್ಷೇತರರು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಜೆಡಿಎಸ್ ಮೈತ್ರಿ ಸಂಬಂಧ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ’
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

‘ಗೆಲ್ಲುವ ವಿಶ್ವಾಸದಿಂದಲೇ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಫಾರೂಕ್ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಬೆಂಬಲಿಸಿ ಎಂದು ಕಾಂಗ್ರೆಸ್ ವರಿಷ್ಠರನ್ನು ಕೇಳುವುದಿಲ್ಲ. ಉಪಚುನಾವಣೆಯಲ್ಲಿ ಜಾತ್ಯತೀತ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿ ಎಂಬ ಉದ್ದೇಶದಿಂದ ಜೆಡಿಎಸ್ ಸ್ಪರ್ಧಿಸಿರಲಿಲ್ಲ. ಈ ಚುನಾವಣೆಯಲ್ಲೂ ಜಾತ್ಯತೀತ ಪಕ್ಷವನ್ನು ಒಡೆದು ಕಾಂಗ್ರೆಸ್ ಪಕ್ಷದ ಮೂರನೇ ಅಭ್ಯರ್ಥಿ ಗೆಲ್ಲುವುದಾದರೆ ನಮ್ಮದೇನು ಅಭ್ಯಂತರವಿಲ್ಲ’
-ಎಚ್.ಡಿ.ರೇವಣ್ಣ ಜೆಡಿಎಸ್ ಮುಖಂಡ

‘ಕಾಂಗ್ರೆಸ್ ಪಕ್ಷ ನಮ್ಮ ಮೇಲೆ ವಿಶ್ವಾಸವಿಟ್ಟು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಪಕ್ಷದ ವರಿಷ್ಟರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ತರುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುವೆ. ಪಕ್ಷದ ಸಾಮಾನ್ಯ ಕಾರ್ಯರ್ತರಿಗೆ ಅವಕಾಶ ಕಲ್ಪಿಸಿದ್ದು, ಇದು ಪಕ್ಷಕ್ಕೆ ರಾಜ್ಯದ ಬಗೆಗಿರುವ ಬದ್ಧತೆಗೆ ಸಾಕ್ಷಿ’
-ಡಾ.ಎಲ್.ಹನುಮಂತಯ್ಯ ರಾಜ್ಯಸಭೆ ಕಾಂಗ್ರೆಸ್ ಅಭ್ಯರ್ಥಿ

‘ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೀವ್ ಚಂದ್ರಶೇಖರ್ ಕನ್ನಡಿಗರಾಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು. 12 ವರ್ಷಗಳಿಂದ ರಾಜ್ಯಸಭೆ ಸದಸ್ಯರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕನ್ನಡಿಗರಲ್ಲವೆಂಬ ಆಕ್ಷೇಪ ಸಲ್ಲ. ಅವರು ಕರ್ನಾಟಕದಲ್ಲೇ ಹುಟ್ಟಿ ಇಲ್ಲೇ ಬೆಳೆದವರು. ಅಪ್ಪಟ ಕನ್ನಡಿಗರು’
-ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News