ರೈತರಿಂದ ಪ್ರತಿಭಟನೆ ವಾಪಸ್

Update: 2018-03-12 17:31 GMT

ಮುಂಬೈ, ಮಾ. 12: ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ರೈತರು ನಾಸಿಕ್‌ನಿಂದ ಮುಂಬೈ ಮಹಾನಗರಕ್ಕೆ ನಡೆಸಿದ ಪಾದಯಾತ್ರೆ ಚಳವಳಿಗೆ ಕೊನೆಗೂ ಜಯ ದೊರೆತಿದೆ. ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರಕಾರ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸೋಮವಾರ ಒಪ್ಪಿಕೊಂಡಿದೆ.

 ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಎನ್‌ಸಿಪಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಶಿವಸೇನೆ ಹಾಗೂ ಪ್ರತಿಪಕ್ಷವಾದ ಕಾಂಗ್ರೆಸ್ ರೈತರ ಚಳವಳಿಗೆ ಬೆಂಬಲ ವ್ಯಕ್ತಪಡಿಸಿತ್ತು ಹಾಗೂ ಅವರ ಬೇಡಿಕೆ ಈಡೇರಿಸುವಂತೆ ಒತ್ತಡ ಹೇರಿತ್ತು. ಕೃಷಿ ಸಾಲ ಮನ್ನಾ,ಕೃಷಿ ಮಾಡುತ್ತಿರುವ ಅರಣ್ಯ ಭೂಮಿ ಬುಡಕಟ್ಟು ರೈತರಿಗೆ ವರ್ಗಾವಣೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾರಾಷ್ಟ್ರದ 50 ಸಾವಿರಕ್ಕೂ ಅಧಿಕ ರೈತರು ನಾಸಿಕ್‌ನಿಂದ ಮಂಗಳವಾರ ಪಾದಯಾತ್ರೆ ಆರಂಭಿಸಿದ್ದು, ರವಿವಾರ ಮುಂಬೈ ತಲುಪಿದ್ದರು. ಇಂದು ವಿಧಾನಸಭಾ ಮುತ್ತಿಗೆ ನಡೆಸಲು ರೈತರು ಸಿದ್ಧರಾಗುತ್ತಿದ್ದಂತೆ ಫಡ್ನವೀಸ್ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಚಳವಳಿಯನ್ನು ಹಿಂತೆಗೆದುಕೊಂಡಿದ್ದಾರೆ.

ದಕ್ಷಿಣ ಮುಂಬೈಯ ಆಝಾದ್ ಮೈದಾನದಲ್ಲಿ ಸೇರಿದ ರೈತರನ್ನು ಉದ್ದೇಶಿಸಿ ರಾಜ್ಯದ ಹಣಕಾಸು ಸಚಿವ ಚಂದ್ರಕಾಂತ್ ಪಾಟೀಲ್ ಮಾತನಾಡಿ, ‘‘ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು’’ ಎಂದರು. ಈ ಸಂದರ್ಭ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಉಪಸ್ಥಿತರಿದ್ದರು. ವಿಧಾನ ಭವನದ ಹೊರಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೃಷಿಗೆ ಬಳಸುತ್ತಿರುವ ಅರಣ್ಯ ಭೂಮಿಯನ್ನು ಬುಡಕಟ್ಟು ಜನರು ಹಾಗೂ ರೈತರಿಗೆ ಹಸ್ತಾಂತರಿಸಲು ಸಮಿತಿ ರೂಪಿಸಲು ನಾವು ಒಪ್ಪಿಕೊಂಡಿದ್ದೇವೆ ಎಂದರು. ‘‘ವಿಧಾನ ಭವನದಲ್ಲಿ ಸೋಮವಾರ ಬುಡಕಟ್ಟು ಹಾಗೂ ರೈತರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು. 2005ಕ್ಕಿಂತ ಹಿಂದಿನಿಂದಲೂ ಕೃಷಿ ಮಾಡುತ್ತಿರುವ ಬಗ್ಗೆ ಪುರಾವೆ ಸಲ್ಲಿಸಿದ ಬುಡಕಟ್ಟು ಜನರಿಗೆ ಕೃಷಿ ಭೂಮಿ ಮಂಜೂರು ಮಾಡಲು ಸಮಿತಿ ರೂಪಿಸಲು ನಾವು ಒಪ್ಪಿಕೊಂಡಿದ್ದೇವೆ. ನಾವು ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದೇವೆ’’ ಎಂದು ಫಡ್ನವೀಸ್ ಹೇಳಿದರು. ‘‘ಚಳವಳಿಯಲ್ಲಿ ಪಾಲ್ಗೊಂಡವರಲ್ಲಿ ಸುಮಾರು ಶೇ. 90ರಿಂದ 95 ಬಡ ಬುಡಕಟ್ಟು ಜನರು. ಅವರು ಅರಣ್ಯ ಭೂಮಿ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಭೂರಹಿತರು ಹಾಗೂ ಅವರಿಗೆ ಕೃಷಿ ಭೂಮಿ ಇಲ್ಲದೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ಬೇಡಿಕೆ ಬಗ್ಗೆ ಸರಕಾರ ಸೂಕ್ಷ್ಮತೆ ಹಾಗೂ ಸಕಾರಾತ್ಮಕತೆ ಹೊಂದಿದೆ’’ ಎಂದು ಅವರು ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಯ ವೇಳೆ ಅವರು ಹೇಳಿದ್ದರು. ‘‘ಪ್ರತಿಭಟನಾಕಾರರ ಬೇಡಿಕೆಯ ಬಗ್ಗೆ ಚರ್ಚೆ ಮಾಡಲು ಸಂಸದೀಯ ಸಮಿತಿ ರೂಪಿಸಲಾಗುವುದು. ಸಮಯ ಮಿತಿ ಒಳಗಡೆ ಅವರ ಸಮಸ್ಯೆ ಪರಿಹರಿಸಲು ನಾವು ನಿರ್ಧಾರ ತೆಗೆದುಕೊಳ್ಳಲಿದ್ದೇವೆ.’’ ಎಂದು ಅವರು ಹೇಳಿದರು. 

ಕೆಂಪು ಸಾಗರವಾದ ಆಝಾದ್ ಮೈದಾನ

  ಸಿಪಿಎಂ ಬೆಂಬಲಿತ ಅಖಿಲ ಭಾರತ ಕಿಶಾನ್ ಸಭಾ ನೇತೃತ್ವದ ಈ ಪ್ರತಿಭಟನೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಕೆಂಪು ಪತಾಕೆಯನ್ನು ಹಿಡಿದಿರುವುದರಿಂದ ಆಝಾದ್ ಮೈದಾನ ಇಂದು ಕೆಂಪು ಸಾಗರವಾಗಿ ಪರಿವರ್ತನೆಯಾಗಿತ್ತು. ಸುಡುಬಿಸಿಲು ಲೆಕ್ಕಿಸದೆ ಆಗಮಿಸಿದ್ದ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ನಾಸಿಕ್‌ನಿಂದ 180 ಕಿ.ಮೀ. ದೂರವನ್ನು ಸುಡು ಬಿಸಿಲನ್ನೂ ಲೆಕ್ಕಿಸದೆ ನಡಿಗೆಯಲ್ಲೇ ಕ್ರಮಿಸಿ ಇಲ್ಲಿಗೆ ಆಗಮಿಸಿದ್ದರು. ಕಳೆದ ಎರಡು ದಿನಗಳಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. 

ರೈತರ ಇತರ ಬೇಡಿಕೆಗಳು -ಒಟ್ಟು ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸ್ವಾಮಿನಾಥನ್ ಸಮಿತಿ ಶಿಫಾರಸು ಅನುಷ್ಠಾನ, ಅರಣ್ಯ ಹಕ್ಕು ಕಾಯ್ದೆ ಜಾರಿ.

-ಬುಡಕಟ್ಟು ಭೂಮಿ ಮುಳಗಡೆಯಾಗದಿರುವಂತೆ, ಯೋಜನೆಯಿಂದ ಈ ಪ್ರದೇಶಗಳಿಗೆ ಹಾಗೂ ಜಿಲ್ಲೆಯ ಇತರ ಬರ ಪೀಡಿತ ಪ್ರದೇಶಗಳಿಗೆ ನೀರು ಲಭ್ಯವಾಗುವಂತೆ ನಾಸಿಕ್, ಥಾಣೆ ಹಾಗೂ ಪಾಲ್ಘಾರ್ ಜಿಲ್ಲೆಯ ನದಿ ಜೋಡಣೆ ಯೋಜನೆಗಳಲ್ಲಿ ಬದಲಾವಣೆ.

ಹೈಸ್ಪೀಡ್ ರೈಲ್ವೆ ಹಾಗೂ ಸೂಪರ್ ಹೈವೇ ಸೇರಿದಂತೆ ಯೋಜನೆಗಳಿಗೆ ರಾಜ್ಯ ಸರಕಾರ ಭೂಸ್ವಾಧೀನ ಮಾಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News