ಬೆಂಗಳೂರು: ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ಮಾ.14 ರಂದು ಬೃಹತ್ ಜನಜಾಗೃತಿ ಸಮಾವೇಶ

Update: 2018-03-12 13:06 GMT

ಬೆಂಗಳೂರು, ಮಾ.12: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜಾತ್ಯತೀತ ಸಂಘಟನೆಗಳ ವತಿಯಿಂದ ಮಾ.14 ರಂದು ಬೃಹತ್ ಜನ ಜಾಗೃತಿ ಸಮಾವೇಶವನ್ನು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡ ಬಸವರಾಜ್ ಕೌತಾಳ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಿಷ್ಠ ಭಾರತ ಮತ್ತು ಬಲಿಷ್ಠ ಸಂವಿಧಾನವನ್ನು ಜಾತಿವಾದಿಗಳಿಂದ ಹಾಗೂ ಕೋಮುವಾದಿಗಳಿಂದ ದೇಶ ಉಳಿಸುವ ಸಲುವಾಗಿ ರಾಜ್ಯಮಟ್ಟದ ಬೃಹತ್ ಜನ ಜಾಗೃತಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಮಾ.14 ರಂದು ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೂ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಈಗ ನಮ್ಮ ದೇಶವನ್ನು ಮುನ್ನಡೆಸುವ ಬೆಳಕಾಗಿದೆ. ಹತ್ತಾರು ಜಾತಿ, ಧರ್ಮಗಳಿದ್ದರೂ ಸಂವಿಧಾನ ರಾಷ್ಟ್ರ ಧರ್ಮವಾಗಿದೆ. ಆದರೆ, ಸಂಘಪರಿವಾರ ಹಾಗೂ ಕೋಮುವಾದಿಗಳಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ ಬದಲಿಗೆ ಮನುಸ್ಮತಿಯನ್ನು ದೇಶದ ಜನರು ಒಪ್ಪಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇಂತಹ ಅಪಾಯಕಾರಿ ಸಂದರ್ಭದಲ್ಲಿ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಸಂವಿಧಾನವನ್ನು ಏಕಾಏಕಿ ನಾಶ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಂಡಿರುವ ಸಂಘಪರಿವಾರ ಹಂತಹಂತವಾಗಿ ಹಲವು ವಾಮಮಾರ್ಗಗಳ ಮೂಲಕ ನಿಷ್ಕ್ರಿಯಗೊಳಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ. ದೇಶದ ಜನರು ಚುನಾಯಿಸಿದ ಸಂಸತ್ತಿಗೆ ಪ್ರತಿಯಾಗಿ ಧರ್ಮ ಸಂಸತ್ತು ಸ್ಥಾಪಿಸಲಾಗಿದೆ. ಈ ಮೂಲಕ ರಹಸ್ಯವಾಗಿ ಮನುಸ್ಮತಿ ಆಧಾರಿತ ಸಂವಿಧಾನವನ್ನು ರೂಪಿಸಲಾಗಿದೆ. ಫ್ಯಾಶಿಸ್ಟ್ ಮನಸ್ಥಿತಿಯುಳ್ಳ ಮೋದಿ ಸರಕಾರ ಸಾಂವಿಧಾನಾತ್ಮಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.

ಸಮಾವೇಶವನ್ನು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಉದ್ಘಾಟಿಸಲಿದ್ದು, ಸಿಪಿಎಂನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ತಮಿಳುನಾಡಿನ ಡಿಪಿಐ ಅಧ್ಯಕ್ಷ ತಿರುಮಾವಳ್ಳನ್, ಆಂಧ್ರಪ್ರದೇಶದ ಮಂದಕೃಷ್ಣ ಮಾದಿಗ, ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ರಾಘವೇಂದ್ರ ಕುಷ್ಟಗಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News