ಪತ್ರ ಬರೆದರೆ ಬಂಡಾಯ ಎನ್ನಲಾಗದು: ಸಿ.ಎಂ ಸಿದ್ದರಾಮಯ್ಯ
ಕೂಡಲಸಂಗಮ, ಮಾ. 12: ‘ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕಾರಿಯೊಬ್ಬರು ಪತ್ರ ಬರೆದರೆ ಅದನ್ನು ಐಪಿಎಸ್ ಅಧಿಕಾರಿಗಳ ಬಂಡಾಯ ಎಂದು ಪರಿಗಣಿಸಬೇಕೇ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಸೋಮವಾರ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿಯೊಬ್ಬರು, ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ, ಅಧಿಕಾರಿಗಳ ದೈನಂದಿನ ಕರ್ತವ್ಯ ನಿರ್ವಹಣೆಯಲ್ಲಿ ಸಂಪುಟದ ಸಹೊದ್ಯೋಗಿಗಳಾಗಲಿ, ಪಕ್ಷದ ಶಾಸಕರಾಗಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಿದರು.
ಹದ್ದುಮೀರಿ ವರ್ತಿಸುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಿ ಎಂದು ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಹಾಗೂ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಡಕ್ ಆದೇಶ ನೀಡಿದ್ದಾರೆ.
‘ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ವ್ಯವಸ್ಥೆಯೇ ಸರಿಯಾಗಿಲ್ಲ ಎಂಬ ಭಾವನೆ ಮೂಡುವಂತಾಗಿದೆ’ ಎಂದು ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಎಡಿಜಿಪಿ ಆರ್.ಪಿ. ಶರ್ಮಾ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು.