ಹಸ್ತಕ್ಷೇಪದಿಂದ ಭ್ರಷ್ಟರಿಗೆ ರಕ್ಷಣೆ: ಜಗದೀಶ್ ಶೆಟ್ಟರ್ ಆರೋಪ
ಬೆಂಗಳೂರು, ಮಾ. 12: ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಮಲಿಂಗಾರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರಾಗಿದ್ದು, ಕೆಂಪಯ್ಯನಂತಹವರ ಹಸ್ತಕ್ಷೇಪದಿಂದ ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಕ್ಷಸ ರಾಜ್ಯವಾಗಿದ್ದು, ರಾಜ್ಯದಲ್ಲಿ ಅರಾಜಕತೆ, ದುರಾಡಳಿತ ಮಿತಿ ಮೀರಿದೆ. ಪ್ರಾಮಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
ಅಧಿಕಾರಿಗಳು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಇದು ರಾಜ್ಯ ಸರಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಲೇವಡಿ ಮಾಡಿದರು.
ಶಾಸಕ ಹಾರಿಸ್ ಪುತ್ರ ನಲಪಾಡ್, ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಹೊಣೆ ಮಾಡಿ ಎಸಿಪಿ ಮಂಜುನಾಥ್‌ರನ್ನು ವರ್ಗಾವಣೆ ಮಾಡಲಾಯಿತು. ಇದೀಗ ಅದೇ ಜಾಗಕ್ಕೆ ಮಂಜುನಾಥ್ ಅವರನ್ನು ಮರು ನಿಯುಕ್ತಿ ಮಾಡಿದ್ದಾರೆ ಎಂದು ಶೆಟ್ಟರ್ ಟೀಕಿಸಿದರು.
ಲೋಕಾಯುಕ್ತ ಕಚೇರಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳ ಕೊಲೆಯತ್ನ ನಡೆದಿದ್ದು, ರಾಜ್ಯ ಸರಕಾರ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಟೀಕಿಸಿದ ಅವರು, ಇಂಥ ಮೊಂಡು ಸರಕಾರವನ್ನು ನಾನು ರಾಜಕೀಯ ಇತಿಹಾಸದಲ್ಲೇ ನೊಡಿಲ್ಲ ಎಂದು ವಾಗ್ದಾಳಿ ನಡೆಸಿದರು.