×
Ad

ಬೆಂಗಳೂರು: ಸಫಾಯಿ ಕರ್ಮಚಾರಿಗಳಿಂದ ಅರೆಬೆತ್ತಲೆ ಪ್ರತಿಭಟನೆ

Update: 2018-03-12 20:07 IST

ಬೆಂಗಳೂರು, ಮಾ. 12: ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಹೊಸ ಯೋಜನೆಗೆ ಸರಕಾರ ಮನ್ನಣೆ ನೀಡಬಾರದೆಂದು ದಲಿತ ಸಫಾಯಿ ಕರ್ಮಚಾರಿಗಳ ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೋಮವಾರ ನಗರದ ಪುರಭವನದ ಎದುರು ಅರಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ವೇದಿಕೆ ಸದ್ಯಸರು, ಸಫಾಯಿ ಕರ್ಮಚಾರಿ ಮತ್ತು ಮ್ಯಾನುಯಲ್ ಸ್ಕಾವೆಂಜರ್ಸ್‌ಗಳ ಅಭಿವೃದ್ಧಿ ನಿಗಮ ಮಂಡಳಿ ರಚನೆಯಾದ ಬಳಿಕ ಮೀಸಲಿಟ್ಟಿರುವ 85 ಕೋಟಿ.ರೂ ಅನುದಾನವನ್ನು ನಮ್ಮ ಏಳಿಗೆಗೆ ಬಳಕೆ ಮಾಡಬೇಕು. ಅಲ್ಲದೇ 2,802 ಹಳೇ ಕಡತಗಳಿಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ವಿ.ದಿನಕರ್ ಮಾದಿಗ, ರಾಜ್ಯದಲ್ಲಿ 8.9ಲಕ್ಷ ಜನ ಸಫಾಯಿ ಕರ್ಮಚಾರಿಗಳಿದ್ದು, ನಮಗೆ ಈ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ನಿಗಮದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಆದರೆ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ನಿಗಮ ಸ್ಥಾಪನೆಯಾದ ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 85 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ವರ್ಗಾಯಿಸಿದ ಕಡತಗಳನ್ನು ತಾಲೂಕು ಅಭಿವೃದ್ಧಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ನೀಡಿದ್ದ ವರದಿ ಪರಿಗಣಿಸದೆ ಹೊಸ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ದೂರಿದರು.

ಬೇಡಿಕೆಗೆ ಸ್ಪಂದಿಸುವುದಿಲ್ಲ: ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಹೊಸ ಯೋಜನೆಗಳನ್ನು ಸಿದ್ಧಪಡಿಸುವಾಗ ಮ್ಯಾನುಯಲ್ ಸ್ಕಾವೆಂಜರ್ಸ್‌ಗಳು ಸಲ್ಲಿಸಿರುವ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಹಿತಾಸಕ್ತಿ ವಿರುದ್ಧವಾಗಿ ಹೊಸ ಕ್ರಿಯಾ ಯೋಜನೆ ರೂಪಿಸಿದ್ದಾರೆ. ಜೊತೆಗೆ ಅಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸದೇ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಸಫಾಯಿ ಕರ್ಮಚಾರಿಗಳಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ವಿರೋಧಿ ಅಧಿಕಾರಿಗಳು: ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಹಾಗೂ ಅಧಿಕಾರಿ ಮಾರಪ್ಪ ಕರ್ಮಚಾರಿ ಮತ್ತು ಮ್ಯಾನುಯಲ್ ಸ್ಕಾವೆಂಜರ್ಸ್‌ಗಳು ಸಲ್ಲಿಸಿರುವ ಅರ್ಜಿಗಳಿಗೆ ಮನ್ನಣೆ ನೀಡಿಲ್ಲ. ಈ ಬಗ್ಗೆ ನ್ಯಾಯ ಕೇಳಲು ಕಚೇರಿಗೆ ಹೋದ ಸಂದರ್ಭದಲ್ಲಿ ನಮ್ಮನ್ನು ನಿಂದಿಸಿ ಹೊರಗೆ ಕಳುಹಿಸಿದ್ದಾರೆ. ಇಂತಹ ದಲಿತ ವಿರೋಧಿ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ, ಹಳೇ ಕಡತಗಳಿಗೆ ಮಂಜೂರಾತಿ ನೀಡದಿದ್ದಲ್ಲಿ ಮ್ಯಾನ್‌ಹೋಲ್‌ಗಳಿಗೆ ಇಳಿದು ನಮ್ಮ ಕೆಲಸ ಆರಂಭಿಸುತ್ತೇವೆ. ಅಲ್ಲದೇ, ರಾಜ್ಯಾಂದ್ಯಂತ ಸಫಾಯಿ ಕರ್ಮಚಾರಿ ಮತ್ತು ಮಾನ್ಯೂಯಲ್ ಸ್ಕಾವೆಂಜರ್ಸ್‌ಗಳು ಪ್ರತಿಭಟನೆ ನಡೆಸುತ್ತೇವೆ. ಮುಂದಾಗುವ ಅನಾಹುತಕ್ಕೆ ರಾಜ್ಯ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಸಫಾಯಿ ಕರ್ಮಚಾರಿಗಳ ಮಾನವ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ನೂರಾರು ಸಫಾಯಿ ಕರ್ಮಚಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News