×
Ad

ಮಾಧ್ಯಮಗಳ ಪ್ರಚಾರದಿಂದಲೇ ವಿದ್ವತ್ ಪ್ರಕರಣಕ್ಕೆ ಹೆಚ್ಚಿನ ಮಹತ್ವ: ಹೈಕೋರ್ಟ್ ಮೌಖಿಕ ಅಭಿಪ್ರಾಯ

Update: 2018-03-12 20:33 IST

ಬೆಂಗಳೂರು, ಮಾ.12: ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿತು.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ನ್ಯಾಯಪೀಠ , ಸೋಮವಾರ ಈ ಆದೇಶ ನೀಡಿತು.

ಮುಹಮ್ಮದ್ ನಲಪಾಡ್ ಪರ ವಾದಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ಅಡಿಯಲ್ಲಿ ವಿದ್ವತ್ ಚಿಕಿತ್ಸೆಯ ಬಗ್ಗೆ ಪಡೆಯಬಹುದಾದ ಹಲವು ದಾಖಲೆಗಳು ಮಾಧ್ಯಮಗಳಲ್ಲಿ ಬಹಿರಂಗಗೊಂಡಿವೆ. ಅಲ್ಲದೆ, ನಲಪಾಡ್, ಶಾಸಕ ಹಾರಿಸ್ ಪುತ್ರನಾಗಿದ್ದರಿಂದ ಈ ಪ್ರಕರಣ ಹೆಚ್ಚಿನ ಮಹತ್ವವನ್ನು ಪಡೆದಿದೆಯೇ ವಿನಹ ಮತ್ಯಾವ ವಿಚಾರಕ್ಕೂ ಅಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಿದ್ವತ್ ಹಾಗೂ ಮುಹಮ್ಮದ್ ನಲಪಾಡ್ ಮಧ್ಯೆ ಆಕಸ್ಮಿಕವಾಗಿ ಗಲಾಟೆ ನಡೆದಿದೆ. ಆದರೆ, ನಲಪಾಡ್ ಮತ್ತು ಆತನ ಸ್ನೇಹಿತರು ಕೈಯಲ್ಲಿರುವ ಬಳೆಯಿಂದ ವಿದ್ವತ್‌ನಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಎಫ್‌ಐಆರ್ ದಾಖಲೆಯಲ್ಲಾಗಲಿ, ಪೊಲೀಸ್ ವರದಿಯಲ್ಲಾಗಲಿ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಿದ್ವತ್ ಪರವಾಗಿ ಎಸ್‌ಪಿಪಿ ಶ್ಯಾಮ್ ಸುಂದರ್ ಅವರು ವಾದಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿದ್ವತ್ ಹಾಗೂ ನಲಪಾಡ್ ಮಧ್ಯೆ ನಡೆದಿರುವ ಗಲಾಟೆಯ ಪ್ರಕರಣ ಚಿಕ್ಕದಾಗಿದ್ದರೂ ಮಾಧ್ಯಮಗಳ ಪ್ರಚಾರದಿಂದಾಗಿ ಎಲ್ಲರೂ ಈ ಪ್ರಕರಣದ ಕಡೆಗೆ ನೋಡುವಂತಾಗಿದೆ ಎಂದು ಮೌಖಿಕ ಅಭಿಪ್ರಾಯಪಟ್ಟಿತು. ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News