ಶೆಟ್ಟರ್ ಆರೆಸೆಸ್ಸ್ ಗಿಳಿಪಾಠವನ್ನು ಒಪ್ಪಿಸುತ್ತಾರೆ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-03-12 15:07 GMT

ಬೆಂಗಳೂರು, ಮಾ. 12: ಎಡಿಜಿಪಿ ಪಿ.ಆರ್.ಶರ್ಮಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರೆಸೆಸ್ಸ್ ನಿರ್ದೇಶನ ನೀಡಿದರಷ್ಟೇ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡುತ್ತಾರೆ. ವಿಧಾನಸಭೆಯಲ್ಲಿ ಶೆಟ್ಟರ್ ನಾಮಕಾವಸ್ತೆ ನಾಯಕರು. ಸ್ವತಂತ್ರವಾಗಿ ಮಾತನಾಡುವ ಅವಕಾಶ ಅವರಿಗೆ ಇಲ್ಲ. ಆರೆಸೆಸ್ಸ್ ಗಿಳಿಪಾಠವನ್ನು ಅವರು ಒಪ್ಪಿಸುತ್ತಾರೆಂದು ಟೀಕಿಸಿದರು.

ನಾನು ಮಂತ್ರಿ ಆದ ಬಳಿಕ ಶೆಟ್ಟರ್ ಶಾಸಕರಾಗಿ ಆಯ್ಕೆಯಾಗಿದ್ದು, ನಾನು ರಾಜಕೀಯಕ್ಕೆ ಬಂದು 29 ವರ್ಷಗಳಾಗಿವೆ. ಶೆಟ್ಟರ್ ನನಗಿಂತ ಕಿರಿಯರು. ನನಗೆ ಪೊಲೀಸ್ ಇಲಾಖೆಯಲ್ಲಿ ಸಂಪೂರ್ಣ ಅಧಿಕಾರವಿದೆ. ಮಾತ್ರವಲ್ಲ ಅಧಿಕಾರಿಗಳು ಸಹಕಾರವನ್ನು ನೀಡುತ್ತಿದ್ದಾರೆ. ಆದರೆ, ರಾಜಕೀಯ ಕಾರಣಕ್ಕಾಗಿ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ವೇಮುಲಾಗೆ ನ್ಯಾಯ ಕೊಡಿಸಲಿಲ್ಲ: ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಹೇಳಿದ್ದಾರೆ. ಆದರೆ, ಹೈದರಾಬಾದ್‌ನ ರೋಹಿತ್ ವೇಮುಲಾಗೆ, ಸ್ಮತಿ ಇರಾನಿ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲ. ಇದೀಗ ವೇಮುಲಾರ ಆತ್ಮ ಬಿಜೆಪಿಯವರನ್ನು ಕಾಡುತ್ತಿದೆ ಎಂದು ಟೀಕಿಸಿದರು.

ಲೋಕಾಯುಕ್ತರ ಮೇಲಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಡಿಸಿಪಿ ಅಮಾನತು ಮಾಡಲಾಗಿದೆ. 2007ರಲ್ಲಿ ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಎಂ.ಎಸ್. ಬಿಲ್ಡಿಂಗ್ ಸೇರಿ ಆರು ಪ್ರಮುಖ ಕಟ್ಟಡಗಳಿಗೆ ಭದ್ರತೆ ಕಲ್ಪಿಸಲು ಆದೇಶಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸರು ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಉದ್ಯಾನನಗರಿ ಬೆಂಗಳೂರಿಗೆ ಗಾರ್ಬೆಜ್ ಸಿಟಿ ಕಳಂಕ ತಂದ ಬಿಜೆಪಿ ಮುಖಂಡರು ಇದೀಗ ಬೆಂಗಳೂರು ರಕ್ಷಿಸಿ ಯಾತ್ರೆ ಕೈಗೊಂಡಿದ್ದಾರೆ. ಇವರ ನಾಲಿಗೆಗೆ ಎಲುಬಿಲ್ಲ. ಎಲುಬಿಲ್ಲದ ನಾಲಿಗೆ ಹೇಗೆ ಬೇಕೋ ಹಾಗೆ ಬದಲಿಸಿಕೊಳ್ಳಬಹುದು ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News