×
Ad

ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್‌ಗೆ ಮಂಪರು ಪರೀಕ್ಷೆ

Update: 2018-03-12 20:48 IST

ಬೆಂಗಳೂರು, ಮಾ.12: ತನ್ನ ವಶದಲ್ಲಿರುವ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಕೆ.ಟಿ.ನವೀನ್ ಕುಮಾರ್‌ನನ್ನು ವಿಶೇಷ ತನಿಖಾ ದಳ ಮಂಪರು ಪರೀಕ್ಷೆಗೆ ಒಳಪಡಿಸಲಿದೆ.

ಗೌರಿ ಲಂಕೇಶ್ ಹಂತಕರಿಗೆ ಸಹಾಯ ಮಾಡಿದ್ದಾನೆ ಎಂದು ಅನುಮಾನಿಸಲಾಗಿರುವ ನವೀನ್‌ಕುಮಾರ್ ಮಂಪರು ಪರೀಕ್ಷೆಗೆ ಅನುಮತಿ ಕೋರಿ ಗೌರಿ ಹತ್ಯೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಶುಕ್ರವಾರ 3ನೆ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಸೋಮವಾರ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮಂಪರು ಪರೀಕ್ಷೆಗೆ ಅನುಮತಿ ನೀಡಿದೆ.

ಅರ್ಜಿ ಸಲ್ಲಿಕೆ ವೇಳೆ, ನವೀನ್‌ಕುಮಾರ್ ಪದೇ ಪದೇ ತನ್ನ ಹೇಳಿಕೆ ಬದಲಿಸುತ್ತಿದ್ದು, ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಎಸ್‌ಐಟಿ ತಂಡ ವಿವರಣೆ ನೀಡಿತ್ತು. ಆದರೆ, ನವೀನ್ ಪರ ವಕೀಲರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದು, ಈಗಾಗಲೇ ಆರೋಪಿಯನ್ನು ಎಂಟು ದಿನಗಳ ಕಾಲ ತನಿಖೆ ಮಾಡಲಾಗಿದೆ. ಆತನಿಗೆ ಸಂಬಂಧವಿಲ್ಲದ ಪ್ರಕರಣದ ಬಗ್ಗೆ ಮಂಪರು ಪರೀಕ್ಷೆ ಮಾಡುವ ಅಗತ್ಯ ಇಲ್ಲ ಎಂದು ವಾದಿಸಿದ್ದರು.

ಆದರೆ ಮಂಪರು ಪರೀಕ್ಷೆಗೆ ಒಳಗಾಗುವುದಕ್ಕೆ ನ್ಯಾಯಾಧೀಶರ ಮುಂದೆ ನವೀನ್‌ಕುಮಾರ್ ಒಪ್ಪಿಗೆ ಸೂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಕೀಲರ ಸಮ್ಮುಖದಲ್ಲೇ ಮಂಪರು ಪರೀಕ್ಷೆಗೆ ನ್ಯಾಯಾಧೀಶರು ಆದೇಶಿಸಿದರು. ಅಹಮದಾಬಾದ್‌ನಲ್ಲಿ ಮಂಪರು ಪರೀಕ್ಷೆ ನಡೆಸುವುದಾಗಿ ನ್ಯಾಯಾಧೀಶರಿಗೆ ಎಸ್‌ಐಟಿ ಪೊಲೀಸರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇದೇ ವೇಳೆ, ಮಾರ್ಚ್ 26ರವರೆಗೂ ನವೀನ್ ಕುಮಾರ್ ನನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News