ಭಾರತದ ಮಹಿಳಾ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮುಜುಗರಕ್ಕೀಡಾದ ಅಮಿತಾಭ್ ಬಚ್ಚನ್

Update: 2018-03-12 18:59 GMT

ಹೊಸದಿಲ್ಲಿ, ಮಾ.12: ಭಾರತದ ಅಥ್ಲೀಟ್‌ಗಳು ಸ್ವದೇಶ ಅಥವಾ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ತಪ್ಪದೇ ಅಭಿನಂದನೆ ಸಲ್ಲಿಸುತ್ತಾರೆ.

 ಭಾರತದ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗೆ ದಕ್ಷಿಣ ಆಫ್ರಿಕದಲ್ಲಿ ಸೀಮಿತ ಓವರ್ ಕ್ರಿಕೆಟ್ ಸರಣಿ ಜಯಿಸಿ ಸ್ವದೇಶಕ್ಕೆ ವಾಪಸಾಗಿದೆ. ಭಾರತದ ಮಹಿಳಾ ತಂಡಕ್ಕೆ ಟ್ಟಿಟರ್‌ನಲ್ಲಿ ಅಭಿನಂದನೆ ಸಲ್ಲಿಸುವ ಭರದಲ್ಲಿ ತಪ್ಪೆಸಗಿದ ಬಚ್ಚನ್ ತಕ್ಷಣವೇ ಕ್ಷಮೆಯಾಚಿಸಿದ್ದಾರೆ.

‘‘ಆಸ್ಟ್ರೇಲಿಯದಲ್ಲಿ ಟ್ವೆಂಟಿ-20 ಹಾಗೂ ಏಕದಿನ ಸರಣಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಮಹಿಳಾ ತಂಡಕ್ಕೆ ಅಭಿನಂದನೆಗಳು. ತಂಡದ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಅಪೂರ್ವವಾಗಿತ್ತ್ತು...ಬೌಂಡರಿ ಲೈನ್‌ನಲ್ಲಿ ಜೆಮಿಮಾ ಪಡೆದ ಕ್ಯಾಚ್ ಅದ್ಭುತವಾಗಿತ್ತು’’ ಎಂದು 75ರ ಹರೆಯದ ಬಚ್ಚನ್ ಟ್ವೀಟ್ ಮಾಡಿದ್ದಾರೆ. ಬಚ್ಚನ್ ಅವರು ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ ಸರಣಿ ಜಯಿಸಿತ್ತು ಎಂದು ಟ್ವೀಟ್ ಮಾಡುವ ಬದಲು ಆಸ್ಟ್ರೇಲಿಯ ವಿರುದ್ಧ ಜಯ ಸಾಧಿಸಿತ್ತು ಎಂದು ತಪ್ಪು ಟ್ವೀಟ್ ಮಾಡಿದ್ದರು. ಬಚ್ಚನ್ ತಪ್ಪಿಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಯಿತು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಬಚ್ಚನ್, ‘‘ನನ್ನ ತಪ್ಪನ್ನು ಕ್ಷಮಿಸಿ..ಆಸ್ಟ್ರೇಲಿಯವನ್ನು ದಕ್ಷಿಣ ಆಫ್ರಿಕ ಎಂದು ಓದಬೇಕು’’ ಎಂದು ಟ್ವೀಟ್ ಮಾಡಿದರು. ಭಾರತ ಪ್ರಸ್ತುತ ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಹೀಗಾಗಿ ಬಚ್ಚನ್ ಗೊಂದಲಕ್ಕೆ ಒಳಗಾಗಿರುವ ಸಾಧ್ಯತೆಯಿದೆ.

ಭಾರತದ ಮಹಿಳಾ ತಂಡ ದಕ್ಷಿಣ ಆಫ್ರಿಕ ವಿರುದ್ದ ಏಕದಿನ ಸರಣಿಯನ್ನು 2-1ರಿಂದಲೂ ಹಾಗೂ ಟ್ವೆಂಟಿ-20 ಸರಣಿಯನ್ನು 3-1 ಅಂತರದಿಂದ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಭಾರತ ಮೊದಲ ಬಾರಿ ದಕ್ಷಿಣ ಆಫ್ರಿಕ ನೆಲದಲ್ಲಿ ಎರಡು ಸರಣಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News