ಭಾರತ ವಿರುದ್ಧದ ಲಾರ್ಡ್ಸ್ ಟೆಸ್ಟ್ ಗೆ ಸ್ಟೋಕ್ಸ್ ಅಲಭ್ಯ?

Update: 2018-03-12 19:01 GMT

ಲಂಡನ್, ಮಾ.12: ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬ್ರಿಸ್ಬೊಲ್ ನೈಟ್ ಕ್ಲಬ್‌ನಲ್ಲಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧ ನಡೆಯಲಿರುವ ಲಾರ್ಡ್ಸ್‌ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಹೊರಗುಳಿಯುವ ಸಾಧ್ಯತೆಯಿದೆ.

 26ರ ಹರೆಯದ ಸ್ಟೋಕ್ಸ್ ಬ್ರಿಸ್ಟೋಲ್ ನೈಟ್ ಕ್ಲಬ್ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಆ್ಯಶಸ್ ಸರಣಿ ಆಡಿರಲಿಲ್ಲ. ಇಂಗ್ಲೆಂಡ್ ತಂಡದೊಂದಿಗೆ ನ್ಯೂಝಿಲೆಂಡ್‌ನಲ್ಲಿರುವ ಸ್ಟೋಕ್ಸ್ ಸೋಮವಾರ ವಿಡಿಯೋ ಕಾಲ್ ಮೂಲಕ ತಾನು ಏನೂ ತಪ್ಪು ಮಾಡಿಲ್ಲ ಎಂದು ಬ್ರಿಸ್ಟೋಲ್ ಕ್ರೌನ್ ಕೋರ್ಟ್‌ಗೆ ತಿಳಿಸಿದ್ದಾರೆ.

ಕೋರ್ಟ್ ವಿಚಾರಣೆಯ ದಿನಾಂಕ ಆಗಸ್ಟ್ 6ಕ್ಕೆ ನಿಗದಿಪಡಿಸಿದ್ದು, ಭಾರತ-ಇಂಗ್ಲೆಂಡ್ ನಡುವೆ ಲಾರ್ಡ್ಸ್ ನಲ್ಲಿ 2ನೇ ಟೆಸ್ಟ್ ಪಂದ್ಯ ಆ.9 ರಿಂದ ಆರಂಭವಾಗಲಿದೆ. ಸ್ಟೋಕ್ಸ್ ವಿಚಾರಣೆಯು 5ರಿಂದ ಏಳು ದಿನಗಳ ಕಾಲ ನಡೆಯುವ ನಿರೀಕ್ಷೆಯಿದೆ. ಭಾರತ ತಂಡ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದ ವೇಳೆ 5 ಟೆಸ್ಟ್, 3 ಏಕದಿನ ಹಾಗೂ 3 ಪಂದ್ಯಗಳ ಟ್ವೆಂಟಿ-20 ಸರಣಿ ಆಡಲಿದೆ. ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 1ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.

 ಸ್ಟೋಕ್ಸ್ ನ್ಯೂಝಿಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ವಾಪಸಾಗಿದ್ದಾರೆ. ಸ್ಟೋಕ್ಸ್ ಒಟ್ಟು 141 ರನ್ ಹಾಗೂ 5 ವಿಕೆಟ್‌ಗಳನ್ನು ಕಬಳಿಸಿ ಇಂಗ್ಲೆಂಡ್ ತಂಡ 3-2 ಅಂತರದಿಂದ ಸರಣಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News