ಶೂಟಿಂಗ್ ವಿಶ್ವಕಪ್:ಭಾರತ ಐತಿಹಾಸಿಕ ಸಾಧನೆ

Update: 2018-03-12 19:09 GMT

ಹೊಸದಿಲ್ಲಿ, ಮಾ.12: ಮೆಕ್ಸಿಕೊದಲ್ಲಿ ಸೋಮವಾರ ಕೊನೆಗೊಂಡ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಒಟ್ಟು 4 ಚಿನ್ನ, 1 ಬೆಳ್ಳಿ ಹಾಗೂ ನಾಲ್ಕು ಕಂಚು ಜಯಿಸಿರುವ ಭಾರತದ ಶೂಟರ್‌ಗಳು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಈ ಮೂಲಕ ಭಾರತ ತಂಡ ಶೂಟಿಂಗ್ ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ವರ್ಷದ ಮೊದಲ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್‌ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್‌ನ ಕೊನೆಯ ದಿನವಾದ ಸೋಮವಾರ ಭಾರತದ ಶೂಟರ್‌ಗಳು ಪದಕ ಜಯಿಸಿಲ್ಲ. ಆದರೆ, ಸ್ಮರಣೀಯ ಪ್ರದರ್ಶನದೊಂದಿಗೆ ದೇಶಕ್ಕೆ ವಾಪಸಾಗಲಿದ್ದಾರೆ.

ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಅಮೆರಿಕದ ವಿನ್ಸೆಂಟ್ ಹ್ಯಾಂಕಾಕ್ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದರು. ಸ್ಕೀಟ್ ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತದ ಶೂಟರ್‌ಗಳಾದ ಸ್ಮಿತ್ ಸಿಂಗ್(116 ಅಂಕ) 15ನೇ, ಅಂಗದ್ ಬಾಜ್ವಾ(115)18ನೇ ಹಾಗೂ ಶೀರಾಝ್ ಶೇಕ್(112)30ನೇ ಸ್ಥಾನ ಪಡೆದಿದ್ದಾರೆ.

 ಸ್ಪರ್ಧೆಯಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚು ಸಹಿತ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿರುವ ಭಾರತ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪದಕ ಪಟ್ಟಿಯಲ್ಲಿ ಮೊದಲ ಬಾರಿ ಅಗ್ರಸ್ಥಾನಕ್ಕೇರಿದೆ.

ಭಾರತದ ಪರ ಶಹಝಾರ್ ರಿಝ್ವಿ, ಮನು ಭಾಕರ್, ಅಖಿಲ್ ಶೆರೋನ್ ಹಾಗೂ ಓಂ ಪ್ರಕಾಶ್ ಮಿಥಾರ್ವಲ್ ತಲಾ ಒಂದು ಚಿನ್ನ ಜಯಿಸಿದರು. ಅಂಜುಮ್ ವೌದ್ಗಲ್ ಬೆಳ್ಳಿ ಪದಕ ಜಯಿಸಿದರೆ, ಜಿತು ರಾಯ್, ರವಿ ಕುಮಾರ್ ಕಂಚು ಜಯಿಸಿದರು. ಸಂಜೀವ್ ರಾಜ್‌ಪೂತ್ ಉತ್ತಮ ಪ್ರದರ್ಶನ ನೀಡಿದರೂ ಪದಕದಿಂದ ವಂಚಿತರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News