ಅಮೆರಿಕ ಭಾರತೀಯರಿಗೆ ನೀಡುತ್ತಿದ್ದ ಅಧ್ಯಯನ ವೀಸಾದಲ್ಲಿ ಗಣನೀಯ ಇಳಿಕೆ

Update: 2018-03-13 04:55 GMT

ವಾಷಿಂಗ್ಟನ್, ಮಾ.13: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಕೈಗೊಳ್ಳಲು ನೀಡುತ್ತಿದ್ದ ವೀಸಾ 2017ರಲ್ಲಿ ಶೇಕಡ 28ರಷ್ಟು ಇಳಿಕೆಯಾಗಿದೆ ಎಂದು ರಕ್ಷಣಾ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಅಮೆರಿಕ ನೀಡುವ ಎಫ್-1 ವಿದ್ಯಾರ್ಥಿ ವೀಸಾ 2016ರಲ್ಲಿ 4,17,728 ಇದ್ದುದು 3,93,573ಕ್ಕೆ ಇಳಿದಿದೆ. ಆದರೆ ಈ ಅವಧಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ನೀಡಿದ ವೀಸಾ 65,257ರಿಂದ 47,302ಕ್ಕೆ ಕುಸಿದಿದೆ. ಚೀನಾಗೆ ನೀಡುವ ವಿದ್ಯಾರ್ಥಿ ವೀಸಾ ಶೇಕಡ 24ರಷ್ಟು ಕಡಿಮೆಯಾಗಿದೆ. 2014ರಿಂದೀಚೆಗೆ ಆಗಿರುವ ವೀಸಾ ನೀತಿಯ ಬದಲಾವಣೆ ಇದಕ್ಕೆ ಪ್ರಮುಖ ಕಾರಣ. ಚೀನಾ ಹೊರತುಪಡಿಸಿ ಉಳಿದ ಒಟ್ಟಾರೆ ಇಳಿಕೆ ಪ್ರಮಾಣ ಶೇಕಡ 13 ಆಗಿದೆ.

ಚೀನಾ ಹಾಗೂ ಭಾರತದ ವಿದ್ಯಾರ್ಥಿಗಳು, ವಿದೇಶಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ ಮತ್ತು ಕೆನಡಾ ವಿದ್ಯಾರ್ಥಿಗಳು ನಂತರದ ಸ್ಥಾನಗಳಲ್ಲಿದ್ದಾರೆ.

ಪ್ರವೇಶ ನೀತಿಯ ಬಗ್ಗೆ ಟ್ರಂಪ್ ಆಡಳಿತದ ಕಟ್ಟುನಿಟ್ಟಿನ ಸೂಚನೆಗಳು ಇದಕ್ಕೆ ಮುಖ್ಯ ಕಾರಣ ಎಂದು ವಾಲ್‌ಸ್ಟ್ರಿಟ್ ಜರ್ನಲ್ ವರದಿ ಮಾಡಿದೆ. ಈ ಸೂಚನೆ ಅನ್ವಯ, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಳಿಕ ಭಾರತಕ್ಕೆ ವಾಪಸ್ಸಾಗುತ್ತಾರೆ ಎನ್ನುವುದುನ್ನು ಭಾರತದ ದೂತಾವಾಸದ ಅಧಿಕಾರಿಗಳು ಖಾತ್ರಿಪಡಿಸಬೇಕು.

ಇದಕ್ಕೂ ಮುನ್ನ ಅಮೆರಿಕ ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಂದ ಪ್ರವೇಶ ಬಯಸಿ ಬಂದ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ವರದಿಯಾಗಿತ್ತು. ಆದರೆ ಅರ್ಜಿಗಳ ಸಂಖ್ಯೆಯಲ್ಲಿ ಕುಸಿತವಾಗಿದ್ದರಿಂದ ವೀಸಾ ಸಂಖ್ಯೆ ಇಳಿಕೆಯಾಗಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News