ಮಕ್ಕಳ ಕಳ್ಳ ಸಾಗಣೆ ಪ್ರಕರಣ: ಸಿಐಡಿಯಿಂದ ಬಿಜೆಪಿ ಪ್ರ.ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ವಿಚಾರಣೆ

Update: 2018-03-13 06:47 GMT

ಇಂದೋರ್, ಮಾ.13: ಮಕ್ಕಳ ಕಳ್ಳಸಾಗಣಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ ಅವರನ್ನು ವಿಚಾರಣೆಗೆ ಗುರಿ ಪಡಿಸಿದ್ದಾರೆ.

ಇಂದೋರ್ ನಗರದಲ್ಲಿ ಸಿಐಡಿ ಅಧಿಕಾರಿಗಳು ಸುಮಾರು ಎರಡು ಗಂಟೆಗಳ ತನಕ ಕೈಲಾಶ್ ಅವರ ವಿಚಾರಣೆ ನಡೆಸಿದ್ದಾರೆ. ಆದರೆ ಅವರು ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದು, ಇದು ಬಿಜೆಪಿಯ ಮಾನಹಾನಿಗೈಯ್ಯಲು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಡೆಸಿದ ಸಂಚು ಎಂದು ಹೇಳಿದ್ದಾರೆ.

ಈ ಪ್ರಕರಣದ ಸಂಬಂಧ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸಿಐಡಿ ಅಧಿಕಾರಿಗಳು ಬಿಜೆಪಿ ಸಂಸದೆ ರೂಪಾ ಗಂಗೂಲಿ ಹಾಗೂ ಕೈಲಾಶ್ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದರು. ಗಂಗೂಲಿ ಹೊರತಾಗಿ  ವಿನಾಯಕ್ ಮಿಶ್ರಾ ಹಾಗೂ ಪ್ರಶಾಂತ್ ಸರೀ ಎಂಬಿಬ್ಬರಿಗೂ ಸೆಕ್ಷನ್ 160 ಅನ್ವಯ ನೋಟಿಸ್ ಜಾರಿಗೊಳಿಸಲಾಗಿತ್ತಲ್ಲದೆ  ಕೈಲಾಶ್ ಹಾಗೂ ರೂಪಾಗೆ ಜುಲೈ 27 ಹಾಗೂ 29ರಂದು  ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸಮನ್ಸ್ ಕೂಡ ಜಾರಿಗೊಳಿಸಿತ್ತು.

ಅಂತಾರಾಷ್ಟ್ರೀಯ ಮಕ್ಕಳ ಕಳ್ಳಸಾಗಣಿಕೆ ಜಾಲವೊಂದಕ್ಕೆ ಕೆಲಸ ಮಾಡುತ್ತಿದ್ದ ಮಕ್ಕಳ ಆಶ್ರಯತಾಣವೊಂದರ ಪರವಾನಿಗೆ ನವೀಕರಣಕ್ಕೆ ಈ ಪ್ರಕರಣದ ಆರೋಪಿಯೊಬ್ಬ ಗಂಗೂಲಿ ಹಾಗೂ ಕೈಲಾಶ್ ಅವರ ಸಹಾಯ ಕೋರಿದ್ದ. ಆರೋಪಿ ಕೈಲಾಶ್ ಹಾಗೂ ಗಂಗೂಲಿಗೆ ದುಬಾರಿ ಉಡುಗೊರೆಗಳನ್ನೂ ಆತ ನೀಡಿದ್ದನೆಂಬ ಆರೋಪವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News