ಯೂಕಿ ಭಾಂಬ್ರಿಗೆ ಸೋಲು

Update: 2018-03-14 18:27 GMT

ಇಂಡಿಯನ್ ವೆಲ್ಸ್,ಮಾ.14: ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತದ ಯುವ ಆಟಗಾರ ಯೂಕಿ ಭಾಂಬ್ರಿ ಸೋಲುಂಡಿದ್ದಾರೆ. ಈ ಮೂಲಕ ಅವರ ಉತ್ತಮ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ.

ಬುಧವಾರ ಎರಡು ಗಂಟೆ, 20 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ 110ನೇ ರ್ಯಾಂಕಿನ ಭಾಂಬ್ರಿ ಅಮೆರಿಕದ ವಿಶ್ವದ ನಂ.21ನೇ ಆಟಗಾರ ಸ್ಯಾಮ್ ಕ್ವೆರ್ರಿ ವಿರುದ್ಧ 7-6(4),4-6, 4-6 ಸೆಟ್‌ಗಳಿಂದ ಸೋತಿದ್ದಾರೆ.

ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ 25ರ ಹರೆಯದ ಭಾರತದ ಆಟಗಾರ 15 ಬ್ರೇಕ್ ಪಾಯಿಂಟ್‌ನಲ್ಲಿ 11 ಪಾಯಿಂಟ್ಸ್‌ನ್ನು ಉಳಿಸಿಕೊಂಡರು.

ಟೂರ್ನಿಯಲ್ಲಿ ಮೂರನೇ ಸುತ್ತಿಗೆ ತಲುಪುವುದರೊಂದಿಗೆ ಭಾಂಬ್ರಿ 45 ಅಂಕ ಗಳಿಸಿದರು. ಸೋಮವಾರ ಬಿಡುಗಡೆಯಾಗಲಿರುವ ನೂತನ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ-100 ಸ್ಥಾನಕ್ಕೆ ವಾಪಸಾಗುವ ಸಾಧ್ಯತೆಯಿದೆ.

ಈ ಟೂರ್ನಿಯು ಭಾಂಬ್ರಿಗೆ ಸ್ಮರಣೀಯವಾಗಿದೆ. ಎರಡು ಬಾರಿಯ ಡಬಲ್ಸ್ ಗ್ರಾನ್‌ಸ್ಲಾಮ್ ಚಾಂಪಿಯನ್ ನಿಕೊಲಸ್ ಮಹುಟ್ ಹಾಗೂ ವಿಶ್ವದ ನಂ.12ನೇ ಆಟಗಾರ ಲುಕಾಸ್ ಪೌಲಿ ಅವರನ್ನು ಸೋಲಿಸಿ ಮೂರನೇ ಸುತ್ತಿಗೆ ತಲುಪಿದ್ದಾರೆ.

ಭಾರತದ ಡೇವಿಸ್ ಕಪ್ ಆಟಗಾರ ಭಾಂಬ್ರಿ ಆಗಸ್ಟ್ 2017ರಲ್ಲಿ ವಿಶ್ವದ ನಂ.22ನೇ ಆಟಗಾರ ಗಾಯೆಲ್ ಮೊನ್‌ಫಿಲ್ಸ್‌ರನ್ನು ಮಣಿಸಿದ್ದು ಈವರೆಗಿನ ಉತ್ತಮ ಸಾಧನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News