ದೇಶದ ಉತ್ತಮ ಆಡಳಿತದ ನಗರ: ಪ್ರಥಮ ಸ್ಥಾನದಲ್ಲಿ ಪುಣೆ

Update: 2018-03-15 08:46 GMT

ಪುಣೆ, ಮಾ.15: ತ್ಯಾಜ್ಯ ಸಮಸ್ಯೆ, ಕೆಟ್ಟ ರಸ್ತೆಗಳು ಹಾಗೂ ಫುಟ್ಪಾತುಗಳು, ಅನಿಯಂತ್ರಿತ ಟ್ರಾಫಿಕ್, ವಾಯು ಮಾಲಿನ್ಯ ಹಾಗೂ  ಅಸಮಾಧಾನಕರ ಆಡಳಿತದ ಹೊರತಾಗಿಯೂ ಇಂಡಿಯಾಸ್ ಸಿಟಿ ಸಿಸ್ಟಮ್ ಫಾರ್ 2017 ವಾರ್ಷಿಕ ಸಮೀಕ್ಷೆಯಲ್ಲಿ ದೇಶದ 20 ರಾಜ್ಯಗಳ 23 ನಗರಗಳ ಪೈಕಿ ಉತ್ತಮ ಆಡಳಿತವಿರುವ ನಗರದ ಪ್ರಥಮ ಸ್ಥಾನವನ್ನು ಪುಣೆ ಪಡೆದುಕೊಂಡಿದೆ. ಐಟಿ ರಾಜಧಾನಿ ಎಂದೇ ಖ್ಯಾತವಾದ ಬೆಂಗಳೂರು ಕೊನೆಯ ಸ್ಥಾನ ಪಡೆದಿದೆ.

ಪುಣೆ ನಗರವು 10ರಲ್ಲಿ 5.1 ಅಂಕಗಳನ್ನು ಪಡೆದು ದಿಲ್ಲಿ (4.4). ಮುಂಬೈ (4.2) ಕೊಲ್ಕತ್ತಾ, ತಿರುವನಂತಪುರಂ, ಭುಬನೇಶ್ವರ್, ಸೂರತ್ ನಗರಗಳನ್ನು ಹಿಂದಿಕ್ಕಿದೆ. ಸಮೀಕ್ಷೆಯನ್ನು ಜನಾಗ್ರಹ ಸೆಂಟರ್ ಫಾರ್ ಸಿಟಿಝನ್‍ಶಿಪ್ ಎಂಡ್ ಡೆಮಾಕ್ರಸಿ ನಡೆಸಿತ್ತು.

ಕಳೆದ ವರ್ಷ ಪುಣೆ ಒಂಬತ್ತನೇ ಸ್ಥಾನದಲ್ಲಿದ್ದರೆ ತಿರುವನಂತಪುರಂ ಮೊದಲ ಸ್ಥಾನದಲ್ಲಿತ್ತು. ಸಮೀಕ್ಷೆಯು ನಗರಗಳಲ್ಲಿನ ಮೂಲಭೂತ ಸೌಕರ್ಯಗಳು,  ನಗರ ಯೋಜನೆ,  ವಿನ್ಯಾಸ,  ನಗರಾಡಳಿತದ ಆರ್ಥಿಕ ಸ್ಥಿತಿಗತಿ, ಸಿಬ್ಬಂದಿ, ನಾಯಕತ್ವ ಹಾಗೂ ಆಡಳಿತದಲ್ಲಿ ಪಾರದರ್ಶಕತೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತ್ತು.

ಒಟ್ಟು 89 ಪ್ರಶ್ನೆಗಳನ್ನು ಕೇಳಲಾಗಿತ್ತು. ನಗರಗಳು ಒಟ್ಟು 10 ಅಂಕಗಳಲ್ಲಿ 3ರಿಂದ 5.1 ಅಂಕಗಳನ್ನು ಪಡೆದಿದ್ದವು. ಚಂಡೀಗಢ, ಡೆಹ್ರಾಡೂನ್, ಪಾಟ್ನಾ ಹಾಗೂ ಚೆನ್ನೈ 3 ರಿಂದ 3.3 ಅಂಕಗಳನ್ನು  ಪಡೆದು ಕೆಳಗಿನ  ಸ್ಥಾನ ಪಡೆದಿವೆ.

ಪುಣೆಯ ನಂತರ ಎರಡನೇ ಸ್ಥಾನ 4.6 ಅಂಕಗಳನ್ನು ಪಡೆದ ಕೊಲ್ಕತ್ತಾಗೆ ಹೋದರೆ, ಮುಂದಿನ ಸ್ಥಾನಗಳು ತಿರುವನಂತಪುರಂ (4.6), ಭುವನೇಶ್ವರ್  (4.6), ಸೂರತ್ (4.5), ದಿಲ್ಲಿ (4.4), ಅಹ್ಮದಾಬಾದ್ (4.4),  ಹೈದರಾಬಾದ್ (4.3), ಮುಂಬೈ (4.2) ಹಾಗೂ ರಾಂಚಿ (4.1) ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News