ಅರುಣ್ ಜೇಟ್ಲಿಯ ಕ್ಷಮೆ ಕೇಳಲಿದ್ದಾರೆ ಅರವಿಂದ್ ಕೇಜ್ರಿವಾಲ್

Update: 2018-03-15 16:02 GMT

ಹೊಸದಿಲ್ಲಿ, ಮಾ.15: ತಮ್ಮ ನಾಯಕರ ವಿರುದ್ಧ ಇಪ್ಪತ್ತಕ್ಕೂ ಅಧಿಕ ಮಾನಹಾನಿ ದೂರುಗಳನ್ನು ಹೊಂದಿರುವ ಆಮ್ ಆದ್ಮಿ ಪಕ್ಷವು ಸದ್ಯ ಈ ಎಲ್ಲಾ ಪ್ರಕರಣಗಳನ್ನು ಬಗೆಹರಿಸಲು ನಿರ್ಧರಿಸಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸಂಪುಟ ಸಚಿವ ಬಿಕ್ರಮ್ ಸಿಂಗ್ ಮಜಿತಿಯರಲ್ಲಿ ಕ್ಷಮೆ ಕೋರುವ ಮೂಲಕ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಳಿಯೂ ಕೇಜ್ರಿವಾಲ್ ಕ್ಷಮೆ ಕೇಳಲಿದ್ದಾರೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ. ಅರುಣ್ ಜೇಟ್ಲಿ ಕೂಡಾ ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ದಿಲ್ಲಿಯ ಮುಖ್ಯ ಕ್ರಿಕೆಟ್ ಆಡಳಿತ ಮಂಡಳಿಯ ಮುಖ್ಯಸ್ಥರಾಗಿದ್ದ 13 ವರ್ಷಗಳಲ್ಲಿ ಜೇಟ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.

ಬಿಕ್ರಮ್ ಸಿಂಗ್, ಪಂಜಾಬ್‌ನಲ್ಲಿ ಮಾದಕದ್ರವ್ಯ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಈ ಆರೋಪ ಸುಳ್ಳು ಎಂದು ನನಗೆ ತಿಳಿಯಿತು. ಹಾಗಾಗಿ ನಾನು ಈ ಹಿಂದೆ ನಿಮ್ಮ ವಿರುದ್ಧ ನೀಡಿದ್ದ ಎಲ್ಲ ಹೇಳಿಕೆಗಳನ್ನು ಹಿಂಪಡೆದುಕೊಳ್ಳುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ ಎಂದು ಕೇಜ್ರಿವಾಲ್ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್‌ಗೆ ತಿಳಿಸಿದರು. ಈ ಕುರಿತು ಸುದ್ದಿ ಮಾಧ್ಯಮಕ್ಕೆ ಭಾರದ್ವಾಜ್ ನೀಡಿದ ಹೇಳಿಕೆಯಲ್ಲಿ, ಕಳೆದ ಏಳು ತಿಂಗಳಲ್ಲಿ ಕೇಜ್ರಿವಾಲ್ ಎರಡನೇ ಬಾರಿ ಕ್ಷಮೆ ಯಾಚಿಸುತ್ತಿದ್ದಾರೆ. ತಮ್ಮ ಪಕ್ಷದ ನಾಯಕರ ವಿರುದ್ಧ ಹೊರಿಸಲಾಗಿರುವ ಮಾನಹಾನಿ ದೂರಗಳನ್ನು ನಿಭಾಯಿಸಲು ಪಕ್ಷ ಈ ದಾರಿಯನ್ನು ಕಂಡುಕೊಂಡಿದೆ ಎಂದು ತಿಳಿಸಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಕೇಜ್ರಿವಾಲ್ ಹರ್ಯಾಣ ಮೂಲದ ಬಿಜೆಪಿಯ ನಾಯಕ ಅವತಾರ್ ಸಿಂಗ್ ಬಡಾನ ಬಳಿ ಕ್ಷಮೆ ಯಾಚಿಸಿದ್ದರು. ಬಡಾನಾ ಓರ್ವ ಭ್ರಷ್ಟ ರಾಜಕಾರಣಿ ಎಂದು ಆಪ್ ಮುಖ್ಯಸ್ಥ 2014ರಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News