×
Ad

ಬೆಂಗಳೂರು: ಬಿಬಿಎಂಪಿಯಿಂದ ಅನಧಿಕೃತ ಜಾಹೀರಾತು ಫಲಕಗಳ ತೆರವು

Update: 2018-03-16 19:32 IST

ಬೆಂಗಳೂರು, ಮಾ.16: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಅನಧಿಕೃತ ಜಾಹೀರಾತು ಫಲಕ ಹಾಗೂ ಭಿತ್ತಿಪತ್ರ ತೆರವು ಕಾರ್ಯಾಚರಣೆ ಆರಂಬಿಸಿದೆ.

ಶುಕ್ರವಾರ ನಗರದ ಪೂರ್ವ ವಲಯದಲ್ಲಿ ಮೇಯರ್ ಆರ್. ಸಂಪತ್ ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಸೇರಿದಂತೆ ಪ್ರತಿಪಕ್ಷದ ನಾಯಕಿ ಶ್ವೇತಾನಾರಾಯಣ್ ಕಾರ್ಯಾಚರಣೆ ನಡೆಸಿ, ಜಾಹೀರಾತು ಫಲಕಗಳು ಹಾಗೂ ಭಿತ್ತಿ ಪತ್ರಗಳನ್ನು ತೆರವುಗೊಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಸಂಪತ್ ರಾಜ್, ಅನಧಿಕೃತ ಜಾಹೀರಾತು ತೆರವು ಕುರಿತು ಕೌನ್ಸಿಲ್ ಸಭೆಯಲ್ಲೇ ಪ್ರಸ್ತಾಪವಾಗಿತ್ತು. ಪಕ್ಷಾತೀತವಾಗಿ ಬ್ಯಾನರ್, ಫ್ಲೆಕ್ಸ್ ತೆರವು ಮಾಡುವಂತೆ ಪಾಲಿಕೆ ಸದಸ್ಯರು ಒಕ್ಕೂರಲಿನಿಂದ ಒತ್ತಾಯಿಸಿದ್ದರು. ಅಲ್ಲದೇ, ಅಕ್ರಮ ಜಾಹೀರಾತು ಫಲಕಗಳ ಸಂಬಂಧ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ, ಇಂದಿನಿಂದ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಎಲ್ಲಂದರಲ್ಲಿ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಇದರಿಂದ ನಗರದ ಸೌಂದರ್ಯ ಹಾಳಾಗುವುದರ ಜೊತೆಗೆ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಎಲ್ಲೆಂದರಲ್ಲಿ ಅನಧಿಕೃತ ಜಾಹೀರಾತು, ಭಿತ್ತಿಪತ್ರ ಅಂಟಿಸಿದರೆ ಅಂಥವರ ವಿರುದ್ಧ ಕೇಸು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಚ್ಚರಿಸಿದರು.

ಅನುಮತಿ ಪಡೆದದ್ದಕ್ಕಿಂತ ಅಧಿಕ ಬ್ಯಾನರ್ ಹಾಕಲಾಗುತ್ತಿದೆ. ಇದನ್ನು ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ನಮ್ಮ ಗಮನಕ್ಕೆ ಬಂದಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹೀಗಾಗಿ, ಇಂತಹ ಪ್ರಕರಣ ಮರುಕಳಿಸಿದರೆ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಈ ವೇಳೆ ವಿವಿಪುರಂ, ಎ.ಎನ್.ಕೆ ರಸ್ತೆಯಲ್ಲಿ ಬೃಹತ್ ಜಾಹೀರಾತು ಫಲಕ. ಮರಗಳಿಗೆ ಮೊಳೆ ಹೊಡೆದು ಭಿತ್ತಿ ಪತ್ರ ಅಂಟಿಸಿದ್ದು ಕಂಡುಬಂತು. ಅಲ್ಲದೆ, ಕಾಂಪೌಂಡ್, ಅಂಗಡಿಗಳ ಮುಂಭಾಗದಲ್ಲೂ ಹೆಚ್ಚಿನ ಜಾಹೀರಾತು ಅಂಟಿಸಿರುವುದು ಕಂಡು ಮೇಯರ್ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಬಿಬಿಎಂಪಿಯಿಂದ ಅನುಮತಿ ಪಡೆದು ಬ್ಯಾನರ್ ಹಾಕಿಕೊಳ್ಳಲಿ. ಇನ್ನುಳಿದಂತೆ ಅನಧಿಕೃತ ಜಾಹೀರಾತು ಹಾಕುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ.
- ಆರ್. ಸಂಪತ್ ರಾಜ್, ಮೇಯರ್

ನಗರದಲ್ಲಿ ಎಷ್ಟು ಅನಧಿಕೃತ ಬ್ಯಾನರ್‌ಗಳಿವೆ ಎಂಬ ಬಗ್ಗೆ ಬಿಬಿಎಂಪಿಗೆ ಸ್ಪಷ್ಟ ಮಾಹಿತಿ ಇಲ್ಲ. ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಮೇಯರ್ ಅನಧಿಕೃತ ಜಾಹೀರಾತು ಫಲಕ ತೆರವಿಗೆ ಮುಂದಾಗಿರುವುದು ಜನರ ಕಣ್ಣೊರೆಸುವ ತಂತ್ರ.
- ಸಾಯಿ ದತ್ತ, ಸಾಮಾಜಿಕ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News