​ಬೆಂಗಳೂರು: ನಾಡಧ್ವಜಕ್ಕೆ ಗೌರವ ಸೂಚಿಸುವ ನಿಯಮಾವಳಿ ರೂಪಿಸಲು ಆಗ್ರಹ

Update: 2018-03-16 14:09 GMT

ಬೆಂಗಳೂರು, ಮಾ.16: ರಾಷ್ಟ್ರ ಧ್ವಜದ ಮಾದರಿಯಲ್ಲಿ ನಾಡಧ್ವಜವನ್ನು ಗೌರವ ಪೂರ್ವಕವಾಗಿ ಪ್ರದರ್ಶಿಸಲು ಅನುಕೂಲವಾಗುವಂತೆ ನಿಯಮ ರೂಪಿಸಲು ಸಲಹಾ ಸಮಿತಿಯನ್ನು ರಚನೆ ಮಾಡಬೇಕು ಎಂದು ಕರ್ನಾಟಕ ನಾಡಧ್ವಜ ಗೌರವ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ನಿವೃತ್ತ ಕರ್ನಲ್ ಜಿ.ಬಸವರಾಜು, ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಹಾಗೂ ಇನ್ನಿತರೆ ಸರಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಲು ಧ್ವಜ ನೀತಿ ಸಂಹಿತೆಯನ್ನು ಜಾರಿ ಮಾಡಲಾಗುತ್ತದೆ. ಅದರಂತೆ ಸೂರ್ಯೋದಯದ ನಂತರ ರಾಷ್ಟ್ರಧ್ವಜವನ್ನು ಕೆಳಗಿಳಸಬೇಕಾಗಿರುತ್ತದೆ. ಸೂರ್ಯಾಸ್ತಮಾನದ ನಂತರ ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದು ಅಪರಾಧವಾಗಿರುತ್ತದೆ. ಅದೇ ರೀತಿಯಲ್ಲಿ ನಾಡಧ್ವಜಕ್ಕೂ ವಿಶೇಷ ನೀತಿ ಸಂಹಿತೆಯನ್ನು ಜಾರಿ ಮಾಡಬೇಕು ಎಂದು ಹೇಳಿದರು.

ರಾಷ್ಟ್ರಧ್ವಜದ ಮೇಲೆ ಯಾವುದೇ ರೀತಿಯ ಕೈ ಬರಹ, ನೆಲದ ಮೇಲೆ ಅಥವಾ ನೀರಿನಲ್ಲಿ ಹಾಕುವಂತಿಲ್ಲ. ಅಲ್ಲದೆ, ಧ್ವಜವನ್ನು ತಲೆಕೆಳಗಾಗಿ ಪ್ರದರ್ಶನ ಮಾಡುವಂತಿಲ್ಲ ಹಾಗೂ ಯಾವುದೇ ವ್ಯಕ್ತಿಗೆ ಗೌರವ ಸೂಚಿಸುವ ಸಂದರ್ಭದಲ್ಲಿ ಧ್ವಜವನ್ನು ಕೆಳಗೆ ಇಳಿಸುವಂತಿಲ್ಲ ಎಂಬ ನಿಯಮಗಳನ್ನು ಸಂಹಿತೆಯಲ್ಲಿ ರೂಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ನಾಡಧ್ವಜವನ್ನು ಪ್ರದರ್ಶಿಸುವ ಬಗ್ಗೆ ಯಾವುದೇ ರೀತಿಯ ನೀತಿ ನಿಯಮಗಳನ್ನು ಜಾರಿ ಮಾಡಿಲ್ಲ. ಇದರಿಂದಾಗಿ, ನಾಡಧ್ವಜಕ್ಕೆ ಅಗೌರವವಾಗುವ ರೀತಿಯಲ್ಲಿ ಹಲವೆಡೆ ಪ್ರದರ್ಶಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆದುದರಿಂದಾಗಿ, ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಸಂಬಂಧ ಹಾಲಿ ಚಾಲ್ತಿಯಲ್ಲಿರುವ ಎಲ್ಲ ರೀತಿಯ ನೀತಿ-ನಿಯಮಗಳನ್ನು ನಾಡಧ್ವಜದಲ್ಲಿಯೂ ಪಾಲಿಸುವಂತೆ ಸೂಕ್ತ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆ. ಹೀಗಾಗಿ, ಸರಕಾರದ ಮಟ್ಟದಲ್ಲಿ ಒಂದು ಉಪ ಸಮಿತಿ ರಚಿಸಬೇಕು. ಸರಕಾರ ರಚಿಸುವ ನೀತಿ-ನಿಯಮಗಳನ್ನು ಎಲ್ಲ ಸರಕಾರಿ ಕಚೇರಿ, ಶಾಲೆ-ಕಾಲೇಜು ಹಾಗೂ ಇತರೆ ಸಂಘ-ಸಂಸ್ಥೆಗಳು ಪಾಲಿಸುವಂತೆ ನಿರ್ದೇಶನ ನೀಡಬೇಕು ಹಾಗೂ ನಾಡಧ್ವಜಕ್ಕೆ ಅಪಮಾನ ಮಾಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ, ಸಮಿತಿ ಸದಸ್ಯ ಕೆ.ಮಥಾಯಿ, ಉದ್ಯಮಿ ರಾಜೇಂದ್ರನ್, ವಕೀಲ ನಿಥಿನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News