×
Ad

ಕುಖ್ಯಾತ ರೌಡಿಗಳ ಮನೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ

Update: 2018-03-16 20:45 IST

ಬೆಂಗಳೂರು, ಮಾ.16: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೆ ನಗರದಲ್ಲಿ ನೆಲೆಸಿರುವ ಕುಖ್ಯಾತ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಿರುವಂತೆ ಖಡಕ್ ಸೂಚನೆ ಕೊಟ್ಟಿದ್ದಾರೆ.

ನಗರದಾದ್ಯಂತ ಕುಖ್ಯಾತಿ ಎಂದು ಹೆಸರು ಪಡೆದಿರುವ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ರೌಡಿಗಳ ಬೆವರಿಳಿಸಿದ್ದಾರೆ. ಒಂಟೆ ರೋಹಿತ್, ಕಡಬಗೆರೆ ಪಾಯ್ಸನ್ ರಾಮ, ಶಿವಾಜಿನಗರದ ತನ್ವೀರ್, ಮಾಗಡಿ ರಸ್ತೆಯ ರಾಮ ಲಕ್ಷ್ಮಣ, ಕೆಂಗೇರಿ ಗಾಂಧಿ, ರಾಬರಿ ಗಿರಿ, ವೆಂಕಿ, ಮಲೆಯಾಳಿ ಪ್ರವೀಣ್, ಸ್ಲಂ ಭರತ್, ಮೈಕಲ್, ಪ್ರಶಾಂತ್ ಸೇರಿದಂತೆ 60ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರ ನೀಡಿದ್ದಾರೆ. ಮಲ್ಲೇಶ್ವರ, ಯಶವಂತಪುರ, ಶಿವಾಜಿನಗರ, ಮಾಗಡಿ ರಸ್ತೆ ಸೇರಿದಂತೆ ರೌಡಿಗಳು ವಾಸವಾಗಿರುವ ನಗರದಲ್ಲಿ ಪೇರೆಡ್ ನಡೆಸಿ ವಶಕ್ಕೆ ಪಡೆದು ಮುಚ್ಚಳಿಕೆ ಪತ್ರಗಳನ್ನು ಬರೆಸಿಕೊಳ್ಳಲಾಗಿದೆ. ಸಾರ್ವಜನಿಕರ ವ್ಯವಹಾರಗಳಲ್ಲಿ ಭಾಗಿಯಾಗಿ ಹಣ ಪೀಕುವುದು ಯಾವುದೇ ಸಣ್ಣಪುಟ್ಟ ದೂರುಗಳು ಬಂದರು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಪೊಲೀಸರಿಗೆ ತಿಳಿಯದಂತೆ ದಂಧೆಗಳಲ್ಲಿ ಕ್ರಿಯಾಶೀಲರಾಗಿರುವ ರೌಡಿಗಳ ಮನೆಗಳಿಗೆ ಭೇಟಿ ನೀಡಿದ ಸಿಸಿಬಿ ಪೊಲೀಸರು ಈಗ ಮಾಡುತ್ತಿರುವ ಕೆಲಸದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮನೆಗಳ ವಿಳಾಸ ಬೇರೆ ಬೇರೆ ನಗರಗಳಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಎಷ್ಟು ಪ್ರಕರಣಗಳು ಚಾಲ್ತಿಯಲ್ಲಿದ್ದು, ಎಷ್ಟು ಪ್ರಕರಣಗಳು ಮುಗಿದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ನಗರದಲ್ಲಿ ನಡೆಯುವ ಗಲಭೆಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ನಿಮ್ಮ ನಗರದಲ್ಲಿ ನಡೆಯುವ ಗಲಭೆಗಳ ಬಗ್ಗೆ ಮಾಹಿತಿ ನೀಡಬೇಕು ನಗರದಲ್ಲಿ ಪುಡಿ ರೌಡಿಗಳು ನಡೆಸುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬೆನ್ನಲ್ಲೆ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಸಿಸಿಬಿ ಡಿಸಿಪಿ ರಾಮ್ ನಿವಾಸ್ ಸೆಟ್ ನೇತೃತ್ವದಲ್ಲಿ ಪೆರೇಡ್ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News