×
Ad

ಬಿಎಂಆರ್‌ಸಿಎಲ್ ನೌಕರರ ವಿರುದ್ಧ ಎಸ್ಮಾ ಜಾರಿ ವಿಚಾರ: ತಡೆಯಾಜ್ಞೆಯನ್ನು ವಿಸ್ತರಿಸಿದ ಹೈಕೋರ್ಟ್

Update: 2018-03-16 21:47 IST

ಬೆಂಗಳೂರು, ಮಾ.16: ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರ ವಿರುದ್ಧ ಎಸ್ಮಾ ಜಾರಿಗೆ ನೀಡಿರುವ ತಡೆಯಾಜ್ಞೆಯನ್ನು ಹೈಕೋರ್ಟ್ ಮಾ.20ರವರೆಗೆ ವಿಸ್ತರಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನೌಕರರ ವಿರುದ್ಧ ಎಸ್ಮಾ ಜಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಬಿಎಂಆರ್‌ಸಿಎಲ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠ, ತಡೆಯಾಜ್ಞೆ ತೆರವುಗೊಳಿಸಲು ನಿರಾಕರಿಸಿತು.

ತದನಂತರ ನೌಕರರ ತಕರಾರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಬಿಎಂಆರ್‌ಸಿಎಲ್ ಪ್ರಧಾನ ಕಾರ್ಯದರ್ಶಿಗೆ ಒಂದು ವಾರ ಸಮಯ ನೀಡಿ ವಿಚಾರಣೆಯನ್ನು ಮಾ.20ಕ್ಕೆ ಮುಂದೂಡಿತು. ಹಾಗೆಯೇ, ಮುಂದಿನ ವಿಚಾರಣೆ ವರೆಗೆ ನೌಕರರ ವಿರುದ್ಧ ಎಸ್ಮಾ ಜಾರಿಗೆ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿತು.

ವೇತನ ಹೆಚ್ಚಳ ಮತ್ತು ನೌಕರರ ಸಂಘಟನೆಗೆ ಮಾನ್ಯತೆ ನೀಡುವ ಕುರಿತು ಬಿಎಂಆರ್‌ಸಿಎಲ್ ಮತ್ತು ಸಂಘ ಸದಸ್ಯರ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಇದರಿಂದ ನೌಕರರು ಮಾ.22ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿ, ನೌಕರರ ವಿರುದ್ಧ ಎಸ್ಮಾ ಜಾರಿ ಮಾಡಲು ಮುಂದಾಗಿದ್ದ ತನ್ನ ಕ್ರಮಕ್ಕೆ ಈಗಾಗಲೇ ನೀಡಿರುವ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಬಿಎಂಆರ್‌ಸಿಎಲ್ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು.

ಪ್ರಕರಣವೇನು: ವೇತನ ಹೆಚ್ಚಳ, ಮೆಟ್ರೋ ಸಿಬ್ಬಂದಿ ಹಾಗೂ ನೌಕರರ ಸಂಘಟನೆಗೆ ಮಾನ್ಯತೆ ನೀಡಲು ಆಗ್ರಹಿಸಿ ಸಂಘವು ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿತ್ತು. ನೌಕರರ ಸಂಘದಲ್ಲಿ ಸೆಕ್ಷನ್ ಇಂಜಿನಿಯರ್‌ಗಳು, ಜ್ಯೂನಿಯರ್ ಇಂಜಿನಿಯರ್‌ಗಳು, ಕಸ್ಟಮರ್ ರಿಲೇಷನ್ ಅಧಿಕಾರಿಗಳು, ನಿಲ್ದಾಣ ನಿರ್ವಾಹಕರು, ರೈಲು ಚಾಲಕರನ್ನೂ ಸೇರಿಸಿಕೊಂಡಿರುವ ಕಾರಣ ನೌಕರರ ಸಂಘಕ್ಕೆ ಮಾನ್ಯತೆ ನೀಡಲಾಗದು ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಇದರಿಂದ 2017ರ ಜುಲೈನಲ್ಲಿ ಮುಷ್ಕರ ನಡೆಸಲು ಮುಂದಾಗಿದ್ದ ನೌಕರರ ವಿರುದ್ಧ ಎಸ್ಮಾ ಜಾರಿಗೆ ಬಿಎಂಆರ್‌ಸಿಎಲ್ ನಿರ್ಧರಿಸಿತ್ತು.

ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ನೌಕರರ ಸಂಘ, ತನಗೆ ಮಾನ್ಯತೆ ನೀಡಲು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಬೇಕು. ಹಾಗೆಯೇ, ಎಸ್ಮಾ ಜಾರಿಗೆ ತಡೆಯಾಜ್ಞೆ ನೀಡಲು ಕೋರಿದ್ದರು. ಎಸ್ಮಾ ಜಾರಿಗೆ ಹೈಕೋರ್ಟ್ 2017ರ ಅ.7ರಂದು ತಡೆಯಾಜ್ಞೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News