ಭಾರತಕ್ಕೆ ಕೈತಪ್ಪಿದ ಅಂಡರ್-20 ಫಿಫಾ ವಿಶ್ವಕಪ್ ಆತಿಥ್ಯ

Update: 2018-03-17 18:46 GMT

ಹೊಸದಿಲ್ಲಿ, ಮಾ.17: ಮುಂಬರುವ ಅಂಡರ್-20 ಫಿಫಾ ವಿಶ್ವಕಪ್ ಆಯೋಜಿಸಬೇಕೆಂಬ ಭಾರತದ ಕನಸು ಭಗ್ನಗೊಂಡಿದೆ. ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ 2019ರ ವಿಶ್ವಕಪ್ ಆತಿಥ್ಯದ ಹಕ್ಕನ್ನು ಪೊಲೆಂಡ್‌ಗೆ ನೀಡಿದೆ. 2019ರ ವಿಶ್ವಕಪ್‌ನ್ನು ಯುರೋಪಿಯನ್ ರಾಷ್ಟ್ರ ಆಯೋಜಿಸಲಿದೆ ಎಂದು ಕೊಲಂಬಿಯಾದಲ್ಲಿ ನಡೆದ ಫಿಫಾ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದೆ.

  ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಫಿಫಾ ಅಂಡರ್-17 ವಿಶ್ವಕಪ್‌ನ್ನು ಯಶಸ್ವಿಯಾಗಿ ಆಯೋಜಿಸಿದ್ದ ಭಾರತ ಅಂಡರ್-20 ವಿಶ್ವಕಪ್ ಆಯೋಜಿಸುವ ಆಕಾಂಕ್ಷೆಯೊಂದಿಗೆ ಬಿಡ್ ಸಲ್ಲಿಸಿತ್ತು. ಅಖಿಲ ಭಾರತ ಫುಟ್ಬಾಲ್ ಸಂಘಟನೆ(ಎಐಎಫ್‌ಎಫ್)ಎರಡು ವರ್ಷಗಳಲ್ಲಿ ಮತ್ತೊಂದು ಫಿಫಾ ಟೂರ್ನಿಯ ಆತಿಥ್ಯವಹಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಸಂಪೂರ್ಣ ಸಜ್ಜುಗೊಂಡಿರುವ ಸ್ಟೇಡಿಯಂ ಸಹಿತ ಫಿಫಾದ ಎಲ್ಲ ಪ್ರಮುಖ ಮಾನದಂಡವನ್ನು ಭಾರತ ಹಾಗೂ ಪೊಲೆಂಡ್ ಈಡೇರಿಸಿದ್ದವು. ಟೂರ್ನಿಯು ಮೇ ಇಲ್ಲವೇ ಜೂನ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಭಾರತದಲ್ಲಿ ಬೇಸಿಗೆ ವೇಳೆ ಫುಟ್ಬಾಲ್ ಆಡಲು ಆಟಗಾರರಿಗೆ ಕಷ್ಟವಾಗಬಹುದು. ಹೀಗಾಗಿ ಪೊಲೆಂಡ್‌ನ್ನು ಫಿಫಾ ಆಯ್ಕೆ ಮಾಡಿದೆ. ಕಳೆದ ಆವೃತ್ತಿಯ ಟೂರ್ನಿಯು 2017ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿತ್ತು. ಅರ್ಜೆಂಟೀನ ಅತ್ಯಂತ ಹೆಚ್ಚು ಬಾರಿ(6) ಟ್ರೋಫಿ ಜಯಿಸಿದೆ. ದಕ್ಷಿಣ ಅಮೆರಿಕದ ತಂಡ ಬ್ರೆಝಿಲ್ ಐದು ಬಾರಿ ಪ್ರಶಸ್ತಿ ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News