ತ್ರಿಕೋನ ಟ್ವೆಂಟಿ -20 ಸರಣಿ ಫೈನಲ್:ಭಾರತಕ್ಕೆ ರೋಚಕ ಜಯ

Update: 2018-03-19 18:08 GMT

ಕೊಲಂಬೊ, ಮಾ.18: ನಿದಾಸ್ ಟ್ವೆಂಟಿ -20 ತ್ರಿಕೋನ ಸರಣಿಯ ಫೈನಲ್ ನಲ್ಲಿ ಭಾರತ ಇಂದು ಬಾಂಗ್ಲಾದೇಶ ತಂಡದ ವಿರುದ್ಧ 4 ವಿಕೆಟ್ ಗಳ ಅಂತರದಲ್ಲಿ ಜಯ ಗಳಿಸಿದೆ.

ಗೆಲುವಿಗೆ 167 ರನ್ ಗಳ ಸವಾಲನ್ನು ಪಡೆದ ಭಾರತ  ನಿಗದಿತ 20  ಓವರ್ ಗಳಲ್ಲಿ 6 ವಿಕೆಟ್  ನಷ್ಟದಲ್ಲಿ 168 ರನ್ ಗಳಿಸಿ ಗೆಲುವಿನ ದಡ ಸೇರಿತು.

ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್ ಗಳ ಆವಶ್ಯಕತೆ ಇತ್ತು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಸೌಮ್ಯ ಸರ್ಕಾರ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.

ಕಾರ್ತಿಕ್ ಔಟಾಗದೆ 29 ರನ್ (8ಎ, 2ಬೌ,3ಸಿ) ಗಳಿದರು. ನಾಯಕ ರೋಹಿತ್ ಶರ್ಮಾ 56 ರನ್ (42ಎ, 4ಬೌ,3ಸಿ), ಶಿಖರ್ ಧವನ್ 10 ರನ್, ಸುರೇಶ್ ರೈನಾ (0), ಲೋಕೇಶ್ ರಾಹುಲ್  24 ರನ್, ಮನೀಷ್ ಪಾಂಡೆ 28 ರನ್, ವಿಜಯ್ ಶಂಕರ್ 17 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

18ನೇ ಓವರ್ ನ ಮುಕ್ತಾಯಕ್ಕೆ ಭಾರತ 5 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿತ್ತು. ಭಾರತದ ಗೆಲುವಿಗೆ 12 ಎಸೆತಗಳಲ್ಲಿ 34 ರನ್ ಗಳಿಸಬೇಕಾಗಿತ್ತು. ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ರುಬೆಲ್ ಹುಸೈನ್ ಓವರ್ ನಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 22 ರನ್ ಕಬಳಿಸಿದರು.

ಕೊನೆಯ ಓವರ್ ನಲ್ಲಿ 12 ರನ್ ಗಳ ಆವಶ್ಯಕತೆ ಇತ್ತು.  ಸೌಮ್ಯ ಸರ್ಕಾರ್ ಅವರ ಮೊದಲ ಎಸೆತ ವೈಡ್ ಆಗಿತ್ತು. ಇನ್ನೊಂದು ಎಸೆತ ಸಿಕ್ಕಿದರೂ ರನ್ ಬರಲಿಲ್ಲ. ಎರಡನೇ ಎಸೆತದಲ್ಲಿ  ವಿಜಯ್ ಶಂಕರ್  1 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ 1 ರನ್, ನಾಲ್ಕನೇ ಎಸೆತದಲ್ಲಿ  ವಿಜಯ ಶಂಕರ್ ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ವಿಜಯ್ ಶಂಕರ್ ಅವರು ಮೆಹಿದಿ ಹಸನ್ ಮಿರಾಝ್ ಗೆ ಕ್ಯಾಚ್ ನೀಡುವ ಮೂಲಕ ನಿರ್ಗಮಿಸಿದರು. ಮತ್ತೆ  ಭಾರತ ಸೋಲಿನ ದವಡೆಗೆ ಸಿಲುಕಿತು. ಆದರೆ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್  ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟರು.

ಕಾರ್ತಿಕ್ ಸಿಕ್ಸರ್‌ನ್ನು ರೋಹಿತ್ ನೋಡಲಿಲ್ಲ ...!

ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 5 ರನ್‌ಗಳ ಆವಶ್ಯಕತೆ ಇತ್ತು. ಪ್ರೇಕ್ಷಕರು ಮತ್ತು ಜಗತ್ತಿನ ಎಲ್ಲ ಕ್ರಿಕೆಟ್ ಅಭಿಮಾನಿಗಳ ಗಮನ ದಿನೇಶ್ ಕಾರ್ತಿಕ್ ಮತ್ತು ಸೌಮ್ಯ ಸರ್ಕಾರ್ ಅವರ ಮೇಲೇ ಕೇಂದ್ರೀಕೃತಗೊಂಡಿತ್ತು. ಆದರೆ ಆ ಕ್ಷಣದಲ್ಲಿ ನಾಯಕ ರೋಹಿತ್ ಶರ್ಮಾ ಗಮನ ಬೇರೆ ಕಡೆಗೆ ಹರಿದಿತ್ತು.

ತನಗೆ ಕಾರ್ತಿಕ್ ಸಿಕ್ಸರ್ ಬಾರಿಸುವುದನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಸ್ವತಃ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.

  ರೋಹಿತ್ ಶರ್ಮಾ ಅವರ ಲೆಕ್ಕಚಾರ ಬೇರೆ ಆಗಿತ್ತು. ಭಾರತಕ್ಕೆ ಗೆಲುವು ಕಠಿಣವಾಗಿತ್ತು. ಒಂದು ವೇಳೆ ಕಾರ್ತಿಕ್ ಬೌಂಡರಿ ಬಾರಿಸಿದರೆ ಏನು ಮಾಡುವುದು ? ಪಂದ್ಯ ಟೈ ಆಗುತ್ತದೆ. ಆಗ ಸೂಪರ್ ಓವರ್‌ನಲ್ಲಿ ಫಲಿತಾಂಶ ನಿರ್ಧಾರವಾಗುತ್ತದೆ ಎಂಬ ಆಲೋಚನೆಯೊಂದಿಗೆ ರೋಹಿತ್ ಸೂಪರ್ ಓವರ್ ಎದುರಿಸುವ ಅವಕಾಶ ಬಂದರೆ ಅದಕ್ಕೆ ತಯಾರಿ ನಡೆಸಲು ಡ್ರೆಸ್ಸಿಂಗ್ ರೂಂ ತೆರಳಿದ್ದರು. ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಪ್ಯಾಡ್ ಕಟ್ಟಿದ್ದರು. ಆದರೆ ಡ್ರೆಸ್ಸಿಂಗ್ ರೂಂನಿಂದ ಹೊರ ಬರುವಷ್ಟರಲ್ಲಿ ಕಾರ್ತಿಕ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

   ‘‘ಕಾರ್ತಿಕ್ ರಾಜ್ಯದ ಪರ ಆಡುವಾಗ ಅವರ ಬ್ಯಾಟಿಂಗ್‌ನ್ನು ನೋಡಿದ್ದೇನೆ. ಐಪಿಎಲ್‌ನಲ್ಲಿ ತಮ್ಮ ತಂಡ ಮುಂಬೈ ತಂಡದ ಆಡಿದ ಹಿನ್ನೆಲೆಯಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯದ ಅರಿವು ನನಗಿದೆ’’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನಾನು ಇಂತಹ ಹೊಡೆತಗಳಿಗೆ ಅಭ್ಯಾಸ ನಡೆಸುತ್ತಿದ್ದೆ: ಕಾರ್ತಿಕ್

ಬಾಂಗ್ಲಾದೇಶ ವಿರುದ್ಧದ ತ್ರಿಕೋನ ಟ್ವೆಂಟಿ-20ಸರಣಿಯ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಭಾರತದ ಗೆಲುವಿನ ರೂವಾರಿನ ಎನಿಸಿಕೊಂಡಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಈ ರೀತಿಯ ಹೊಡೆತಗಳಿಗಾಗಿ ತಾನು ಅಭ್ಯಾಸ ನಡೆಸುತ್ತಿರುವುದಾಗಿ ಹೇಳಿದ್ದಾರೆ.

 ದಿನೇಶ್ ಕಾರ್ತಿಕ್ ಕ್ರೀಸ್‌ಗೆ ಬಂದಾಗ ಭಾರತ 5 ವಿಕೆಟ್ ನಷ್ಟದಲ್ಲಿ 133 ರನ್ ಗಳಿಸಿತ್ತು. ಅವರು ಎದುರಿಸಿದ ಮೊದಲ ಓವರ್‌ನ ಮೂರು ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಸೂಚನೆ ನೀಡಿದ್ದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಸಾಧ್ಯವಾಗಿರುವುದಕ್ಕೆ ಕಾರ್ತಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ‘‘ ಸೋಲಿನಿಂದ ನೋವಾಗಿದೆ. ಆದರೆ ನಾವು ಇದೇ ವೇಳೆ ಕಲಿಯಲು ಸಾಕಷ್ಟಿದೆ. ಗೆಲುವಿನ ಹೆಗ್ಗಳಿಕೆ ದಿನೇಶ್ ಕಾರ್ತಿಕ್‌ಗೆ ಸಲ್ಲಬೇಕು. ಅವರು ನಮ್ಮ ಕೈಯಲ್ಲಿದ್ದ ಗೆಲುವನ್ನು ಕಿತ್ತುಕೊಂಡರು ’’ ಎಂದು ಬಾಂಗ್ಲಾ ತಂಡದ ನಾಯಕ ಶಾಕೀಬ್ ಅಲ್ ಹಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News