ರಾಜ್ಯ ವಿಧಾನಸಭಾ ಚುನಾವಣೆ: ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ
ಬೆಂಗಳೂರು, ಮಾ.19: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆ ನಡೆಸಲು ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು ಮಹಾನಗರ ಜಿಲ್ಲಾ ಚುನಾವಣಾಧಿಕಾರಿಯಾದ ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್, ಬೆಂಗಳೂರು ಪೊಲೀಸ್ ಆಯುಕ್ತರು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಸಿದ್ಧತೆ ಹಾಗೂ ಭದ್ರತೆಗೆ ಸಂಬಂಧಿಸಿದ ಮಹತ್ವವಾದ ಸಭೆ ನಡೆಸಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ ಪ್ರಸಾದ್, ಚುನಾವಣೆಯಲ್ಲಿ ಮತದಾರರು ಯಾವುದೇ ಭಯವಿಲ್ಲದೆ ಮತದಾನ ಮಾಡುವ ಮೂಲಕ ಮುಕ್ತ ಹಾಗೂ ನ್ಯಾಯಯುತವಾದ ಚುನಾವಣೆ ನಡೆಸಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚುನಾವಣಾ ಉಸ್ತುವಾರಿಗಾಗಿ 550 ತಂಡಗಳನ್ನು ನೇಮಕ ಮಾಡಿದ್ದು, ಮತದಾರರು ಒತ್ತಡ ಹಾಗೂ ಆಮಿಷಕ್ಕೆ ಒಳಗಾಗುತ್ತಿರುವುದನ್ನು ತಡೆಯಲು ಮತ್ತು ಒಳಗಾಗುತ್ತಿರುವ ಕುರಿತು ಮಾಹಿತಿ ಪಡೆಯಲು ಈ ತಂಡ ಕಾರ್ಯನಿರ್ವಹಿಸಲಿದೆ. ನಗರದಲ್ಲಿ 8,278 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಪ್ರತಿ 15 ಮತಗಟ್ಟೆಗಳಿಗೆ ಒಂದರಂತೆ ಸ್ಪೆಕ್ಟರ್ ಮ್ಯಾಜಿಸ್ಟ್ರೇಟ್, ಹಿರಿಯ ಪೊಲೀಸ್ ಅಧಿಕಾರಿ, ವಿಡಿಯೋ ಗ್ರಾಫರ್ ಹಾಗೂ ಚುನಾವಣಾಧಿಕಾರಿಗಳನ್ನೊಳಗೊಂಡ ಉಸ್ತುವಾರಿ ತಂಡಗಳು ಕಾರ್ಯನಿರ್ವಹಿಸಲಿದೆ ಎಂದು ಅವರು ವಿವರಿಸಿದರು.
ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರ ಮೇಲೆ ಆಮಿಷವೊಡ್ಡುವವರು ಹಾಗೂ ಅವರ ಮೇಲೆ ಒತ್ತಡ ತರುವವರ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ರವಾನೆ ಮಾಡಲಾಗುತ್ತದೆ. ಒತ್ತಡ ಹಾಗೂ ಆಮಿಷಗಳು ಎಲ್ಲಿ ಇರುತ್ತದೆಯೋ ಅಂತಹ ಸ್ಥಳಗಳಲ್ಲಿ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ 550 ತಂಡ ಕಾರ್ಯನಿರ್ವಹಿಸಲಿವೆ ಎಂದರು.
ಸೂಕ್ಷ್ಮ ಮತಗಟ್ಟೆಗಳ ಮಾನದಂಡಗಳನ್ನು ರೂಪಿಸಲಾಗಿದೆ. ಗುರುತಿನ ಚೀಟಿ, ಕಳೆದ ಬಾರಿ ಶೇ.90 ಮತದಾನವಾಗಿತ್ತು. ಒಂದೇ ಪಕ್ಷಕ್ಕೆ ಶೇ.70 ರಷ್ಟು ಮತದಾನವಾಗಿದ್ದು, ಈ ಹಿಂದೆ ನಡೆದಿದ್ದ ಎಲ್ಲ ಗಲಾಟೆಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. ತಾತ್ಕಾಲಿಕವಾಗಿ ಬಿಟ್ಟು ಹೋಗಿರುವವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಎಲ್ಲ ಭಿತ್ರಿಪತ್ರಗಳನ್ನು ತೆರವು ಮಾಡಿಸಲಾಗುತ್ತದೆ ಹಾಗೂ ಭಿತ್ತಿ ಪತ್ರಗಳನ್ನು ಹಾಕದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಭಿತ್ತಿಪತ್ರ, ನೀತಿ ಸಂಹಿತೆ ಉಲ್ಲಂಘಿಸಿ ಗೋಡೆ ಬರಹ ಹಾಗೂ ಬ್ಯಾನರ್‌ಗಳನ್ನು ಕಟ್ಟಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 6 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ನಿಯೋಜಿಸಿದ್ದು, ಅವುಗಳಿಗೆ ಜಿಪಿಎಸ್ ಅಳವಡಿಸಲಾಗಿರುತ್ತದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಈ ಸ್ಕ್ವಾಡ್‌ಗಳು ಹದ್ದಿನ ಕಣ್ಣಿಟ್ಟಿರುತ್ತವೆ. ಇದಲ್ಲದೆ, 3 ಸ್ಟಾಟಿಕ್ ಸ್ಕ್ವಾಡ್‌ಗಳು ನಿರ್ಧಿಷ್ಟ ಸ್ಥಳಗಳಲ್ಲಿ ನಿಂತು ಕಾರ್ಯನಿರ್ವಹಿಸಲಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಒಂದೇ ಸ್ಥಳದಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥಪ್ರಸಾದ್ ಹೇಳಿದರು.
ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಉಮೇಶ್ ಸಿನ್ಹಾ ಮಾ.20 ರಂದು ಹಾಗೂ ಮಾ.21 ರಂದು ನಗರಕ್ಕೆ ಭೇಟಿ ನೀಡಲಿದ್ದು, ಇಲ್ಲಿನ ಭದ್ರತೆ, ಸಿದ್ಧತೆ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಲಿದ್ದು, ಮಾಹಿತಿ ಪಡೆದ ನಂತರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಲಿದೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಬೇಕು ಎಂಬುದು ನಮ್ಮ ಗುರಿಯಾಗಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವವರಿಂದ ಚುನಾವಣೆ ಮುಗಿಯುವವರೆಗೂ ವಶಕ್ಕೆ ಪಡೆದು, ನಂತರ ಹಿಂದಿರುಗಿಸಲಾಗುತ್ತದೆ. ಚುನಾವಣಾ ಆಯೋಗದ ಪ್ರಕಾರ ಎಲ್ಲ ರೌಡಿ ಶೀಟರ್‌ಗಳ ಪಟ್ಟಿ ತಯಾರಿಸಿದ್ದು, ಅವರ ಮೇಲೆ ಕಣ್ಣಿಡಲಾಗಿದೆ
- ಸುನೀಲ್ ಕುಮಾರ್, ಪೊಲೀಸ್ ಆಯುಕ್ತ