ಯುವ ಕಲಾವಿದರು ಸ್ವತಂತ್ರವಾಗಿ ಯೋಚಿಸುವಂತಾಗಲಿ: ಡಾ.ವರ್ಮ
ಬೆಂಗಳೂರು, ಮಾ.19: ಯುವ ಕಲಾವಿದರು ಸ್ವತಂತ್ರವಾಗಿ ಯೋಚಿಸಿ, ಹೊಸ ಹೊಸ ಕಲಾಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಸಲ್ಲಿಸಬೇಕು ಎಂದು ಹಿರಿಯ ಚಿತ್ರ ಕಲಾವಿದ ಡಾ.ಬಿ.ಕೆ.ಎಸ್ ವರ್ಮ ಸಲಹೆ ನೀಡಿದ್ದಾರೆ.
ಸೋಮವಾರ ನಗರದ ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಹಾಗೂ ಬೆಂಗಳೂರು ಮೆಟ್ರೋ ನಿಗಮದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಯುವ ಕಲಾವಿದರು ಸ್ವತಂತ್ರವಾಗಿ ಯೋಚಿಸಿದಷ್ಟು ಸೃಜನಾತ್ಮಕವಾಗಿ ಹಾಗೂ ಕಲಾತ್ಮಕವಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು.
ಹಿರಿಯ ಕಲಾವಿದರು ಯುವ ಕಲಾವಿದರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು. ಜೊತೆಗೆ, ಕಾಲ ಕಾಲಕ್ಕೆ ನಿರ್ದಿಷ್ಟವಾದ ನಿರ್ದೇಶನ ನೀಡುತ್ತಿರಬೇಕು. ಸಣ್ಣ-ಪುಟ್ಟ ತಪ್ಪುಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ ಕಲಾವಿದರ ಶ್ರಮವನ್ನು ಪರಿಗಣಿಸಬೇಕು. ಆಗ ಮಾತ್ರ ಯುವ ಕಲಾವಿದರು ಸ್ವತಂತ್ರವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಅಲ್ಲದೆ, ಅವರ ಬೌದ್ಧಿಕತೆಯೂ ಹೆಚ್ಚಳವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಬಾಗಿಲ ತೋರಣಗಳು, ರಂಗೋಲಿಗಳು ಸೇರಿದಂತೆ ಕಲಾವಿದರು ದೈನಂದಿನ ಜೀವನದಲ್ಲಿ ಕಲಾತ್ಮಕತೆಯನ್ನು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ ಮಾತನಾಡಿ, ಕಲೆಯಿಂದ ಧರ್ಮ, ಕಾಮ, ಮೋಕ್ಷ ಎಲ್ಲವೂ ಸಿಗುತ್ತದೆ. ಧರ್ಮ, ಜಾತಿ ಎಂಬ ಭೇದವಿಲ್ಲದೆ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಅದಕ್ಕಾಗಿ ಅಕಾಡೆಮಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ರಾಜ್ಯದಲ್ಲಿ ನಡೆಯುವ ಎಲ್ಲ ಕಲಾಶಿಬಿರಗಳಲ್ಲಿ ಹೆಚ್ಚು ಜನರು ಪ್ರವೇಶ ಪಡೆಯುವಂತಾಗಬೇಕು ಹಾಗೂ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಲಾವಿದರು ಬೇರೆ ಕಲಾವಿದರ ಕಲೆಯನ್ನು ಆಸ್ಪದಿಸಬೇಕು. ಯಾವುದೇ ಒಂದು ಕಲೆಯ ರಚನೆಗೂ ಮೊದಲು ಅದರ ಹಿನ್ನೆಲೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಕಲೆಯನ್ನು ಕಲಿಯಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೋ ನಿಗಮದ ತೆರಿಗೆ ಮತ್ತು ಸಂಪನ್ಮೂಲದ ಪ್ರಧಾನ ವ್ಯವಸ್ಥಾಪಕ ಯು.ಎ.ವಸಂತ ರಾವ್, ಅಕಾಡೆಮಿ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ, ರಘು ಕೊಂಡೂರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.