ಕಳೆದ ವರ್ಷವಿದ್ದ ಮೀಸಲಾತಿಯನ್ನೇ ಮುಂದುವರಿಸಲಾಗುವುದು: ಹೈಕೋರ್ಟ್‌ಗೆ ಮೆಮೋ ಸಲ್ಲಿಸಿದ ಸರಕಾರ
ಬೆಂಗಳೂರು, ಮಾ.19: ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇತರೆ ರಾಜ್ಯದಲ್ಲಿರುವ ಸರಕಾರಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗಾಗಿ ಈ ಹಿಂದೆ ಇದ್ದ ಮೀಸಲಾತಿಯನ್ನೇ ಅನುಸರಿಸಲು ಬದ್ಧವಿರುವುದಾಗಿ ಹೈಕೊರ್ಟ್‌ಗೆ ರಾಜ್ಯ ಸರಕಾರ ಮೆಮೋ ಸಲ್ಲಿಸಿದೆ.
ವಸತಿ ಶಾಲೆಗಳ ದಾಖಲಾತಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ, ಶೇ.100 ಸೀಟುಗಳನ್ನು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿರುವ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳ ಪಾಲಕರಾದ ಬೆಳಗಾವಿಯ ವಿಶ್ವನಾಥ ಎಸ್. ಮಠದ್ ಹಾಗೂ ಇತರ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠದಲ್ಲಿ ಸೋಮವಾರ ನಡೆಯಿತು.
ಈ ವೇಳೆ ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿದ ಸರಕಾರಿ ವಕೀಲರು, ರಾಜ್ಯದ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಈ ಹಿಂದಿನಂತೆ ಶೇ.50 ಸೀಟುಗಳನ್ನು ಸಾಮಾನ್ಯ ವರ್ಗ, ಶೇ.25 ಸೀಟು ಎಸ್‌ಸಿ, ಎಸ್‌ಟಿ ಹಾಗೂ ಶೇ. 25 ಸೀಟುಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲು ಮರುಸ್ಥಾಪಿಸಲಾಗಿದೆ. ಈ ಕುರಿತು 2018ರ ಫೆ.28ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ವಿವರಿಸಿದರು.
ಈ ಮೆಮೋ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಗಳನ್ನು ಇತ್ಯರ್ಥಪಡಿಸಿತು. ಇದರಿಂದ ಕಳೆದ ಪೆ.18ರಂದು ವಸತಿ ಶಾಲೆಗಳ ಪ್ರವೇಶಾತಿಗಾಗಿ ನಡೆಸಲು ಉದ್ದೇಶಿಸಲಾಗಿದ್ದ ಪ್ರವೇಶ ಪರೀಕ್ಷೆಗಳಿಗೆ ನೀಡಿದ್ದ ತಡೆಯಾಜ್ಞೆಯೂ ತೆರವುಗೊಂಡಂತಾಗಿದ್ದು, ಹೊಸದಾಗಿ ದಿನಾಂಕ ಪ್ರಕಟಿಸಿ ಸರಕಾರ ಪ್ರವೇಶ ಪರೀಕ್ಷೆಗಳನ್ನು ನಡೆಸಬಹುದಾಗಿದೆ.
ಪ್ರಕರಣವೇನು: ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್, ಇಂದಿರಾ ಗಾಂಧಿ ಮತ್ತು ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ನಡೆಯುತ್ತಿದ್ದು, ಈ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಒದಗಿಸಲಾಗುತ್ತದೆ. 1995ರಲ್ಲಿ ವಸತಿ ಶಾಲೆಗಳ ಒಟ್ಟು ಸೀಟುಗಳ ಪೈಕಿ ಶೇ.50 ಸೀಟುಗಳನ್ನು ಸಾಮಾನ್ಯ ವರ್ಗ, ಶೇ.25 ಸೀಟು ಎಸ್‌ಸಿ, ಎಸ್‌ಟಿ ಹಾಗೂ ಶೇ. 25 ಸೀಟುಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿರಿಸಲಾಗಿತ್ತು. ಆದರೆ, 2018-19ನೇ ಸಾಲಿನ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿ 2017ರ ಎ.4ರಂದು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಶೇ.100 ಸೀಟು ಮೀಸಲು ಕಲ್ಪಿಸಲಾಗಿತ್ತು.
ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಮೀಸಲು ಕಲ್ಪಿಸಲು ಕೋರಿ ಕೆಲ ವಿದ್ಯಾರ್ಥಿಗಳ ಪಾಲಕರು ಸಲ್ಲಿಸಿದ್ದ ಮನವಿಯನ್ನು ಸರಕಾರ ಪರಿಗಣಿಸಿರಲಿಲ್ಲ. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಪಾಲಕರು, ಸರಕಾರದ ಕ್ರಮದಿಂದಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಹೀಗಾಗಿ ತಮ್ಮ ಮನವಿ ಪರಿಗಣಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಹಾಗೂ ಅರ್ಜಿ ಇತ್ಯರ್ಥವಾಗುವವರೆಗೆ ಪ್ರವೇಶ ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದರು.
ಅರ್ಜಿಯನ್ನು ಫೆ.15ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ, ಫೆ.18ರಂದು ರಾಜ್ಯಾದ್ಯಂತ ವಸತಿ ಶಾಲೆಗಳ 40 ಸಾವಿರಕ್ಕೂ ಅಧಿಕ ಸೀಟುಗಳಿಗೆ ನಡೆಯಬೇಕಿದ್ದ ಪ್ರವೇಶ ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿತ್ತು.