ಇರಾಕ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಮೃತ್ಯು: ಸುಷ್ಮಾ ಸ್ವರಾಜ್

Update: 2018-03-20 15:34 GMT

 ಹೊಸದಿಲ್ಲಿ, ಮಾ. 20: ಸುಮಾರು ಮೂರು ವರ್ಷಗಳ ಹಿಂದೆ ಇರಾಕ್‌ನಿಂದ ಐಸಿಸ್ ಅಪಹರಿಸಿದ 39 ಭಾರತೀಯರನ್ನು ಹತ್ಯೆಗೈಯಲಾಗಿದೆ ಹಾಗೂ ಅವರ ಮೃತದೇಹಗಳು ಪತ್ತೆಯಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಸಂಸತ್‌ಗೆ ತಿಳಿಸಿದ್ದಾರೆ. 2015 ಜೂನ್‌ನಲ್ಲಿ ಇರಾಕ್‌ನ ಮೊಸೂಲ್‌ನಿಂದ 40 ಮಂದಿ ಭಾರತೀಯರನ್ನು ಐಸಿಸ್ ಅಪಹರಿಸಿತ್ತು. ಇವರಲ್ಲಿ ಓರ್ವ ಬಾಂಗ್ಲಾದೇಶದ ಮುಸ್ಲಿಮ್ ವ್ಯಕ್ತಿ ತಪ್ಪಿಸಿಕೊಂಡಿದ್ದ. ಉಳಿದ 39 ಮಂದಿ ಭಾರತೀಯರನ್ನು ಬಾದೂಶ್‌ಗೆ ಕರೆದೊಯ್ದು ಹತ್ಯೆಗೆಯ್ಯಲಾಗಿತ್ತು ಎಂದು ಎಂದು ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ನೀಡಿದ ಸ್ವಯಂಪ್ರೇರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ಇರಾಕ್ ಬಾದೂಶ್‌ನ ದಿಬ್ಬವೊಂದಕ್ಕೆ ಕರೆದೊಯ್ದಿತು. ಅಲ್ಲಿ ಐಸಿಸ್ ಕೆಲವು ಮೃತದೇಹಗಳನ್ನು ದಫನ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದರು. ಈ ದಿಬ್ಬ ಸಾಮಾಹಿಕ ಸಮಾಧಿ ಎಂಬುದು ಭೂಮಿ ಆಳವನ್ನು ಶೋಧಿಸುವ ರಾಡರ್ ಮೂಲಕ ತಿಳಿಯಿತು. ಮೃತದೇಹಗಳನ್ನು ಹೊರ ತೆಗೆಯಲು ಭಾರತೀಯ ಅಧಿಕಾರಿಗಳು ಇರಾಕ್‌ನ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದ್ದರು. ಸಮಾಧಿ ಶೋಧಿಸಿದಾಗ ಉದ್ದ ಕೂದಲು, ಇರಾಕ್‌ಯೇತರ ಶೂ ಹಾಗೂ ಗುರುತು ಚೀಟಿ ಹೊಂದಿದ್ದ 39 ಮಂದಿಯ ಮೃತದೇಹಗಳಿದ್ದವು ಎಂದು ಅವರು ಹೇಳಿದ್ದಾರೆ. ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಗೆ ಬಾಗ್ದಾದ್‌ಗೆ ಕಳುಹಿಸಲಾಗಿತ್ತು. ಡಿಎನ್‌ಎ ಪರೀಕ್ಷೆ ನಡೆಸಿದ ಮಾರ್ಟಿರ್ಸ್ ಫೌಂಡೇಶನ್ ಪತ್ತೆಯಾದ 39 ಮೃತದೇಹಗಳಲ್ಲಿ 38 ಮೃತದೇಹಗಳ ಡಿಎನ್‌ಎ ನಾಪತ್ತೆಯಾದ ಭಾರತೀಯರ ಡಿಎನ್‌ಗೆ ಹೋಲಿಕೆಯಾಗುತ್ತಿರುವುದನ್ನು ಸಾಬೀತುಪಡಿಸಿತ್ತು ಎಂದು ಅವರು ತಿಳಿಸಿದ್ದಾರೆ. ಒಟ್ಟು 39 ಮೃತದೇಹಗಳಲ್ಲಿ 27 ಮಂದಿ ಪಂಜಾಬ್, 6 ಬಿಹಾರ್, 4 ಹಿಮಾಚಲ ಪ್ರದೇಶ ಹಾಗೂ 2 ಪಶ್ಚಿಮ ಬಂಗಾಳಕ್ಕೆ ಸೇರಿದ ವ್ಯಕ್ತಿಗಳದ್ದು.

ಒಂದು ಮೃತದೇಹವನ್ನು ಇದುವರೆಗೆ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಮೃತದೇಹಗಳನ್ನು ಭಾರತಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ. ಸಿಂಗ್ ವಿಶೇಷ ವಿಮಾನದಲ್ಲಿ ಇರಾಕ್‌ಗೆ ತೆರಳಲಿದ್ದಾರೆ ಎಂದು ಅವರು ತಿಳಿಸಿದರು. ನಿಯಮ ಉಲ್ಲಂಘಿಸಿಲ್ಲ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಸರಕಾರ ಯಾರನ್ನೂ ಕತ್ತಲೆಯಲ್ಲಿ ಇರಿಸಿಲ್ಲ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಅಧಿವೇಶನ ಆರಂಭವಾದ ಬಳಿಕ ಮೊದಲು ಸದನಕ್ಕೆ ಮಾಹಿತಿ ನೀಡುವುದು ನನ್ನ ಕರ್ತವ್ಯ ಎಂದಿದ್ದಾರೆ. ಪುರಾವೆ ಲಭ್ಯವಾಗುವವರೆಗೆ ಕಡತ ಮುಚ್ಚುವುದಿಲ್ಲ ಎಂದು ನಾನು ನಿರಂತರ ಸದನದಲ್ಲಿ ಹೇಳುತ್ತಾ ಬಂದಿದ್ದೇನೆ. ಕಡತ ಮುಚ್ಚುವುದಕ್ಕಾಗಿ ಇತರರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವುದು ಪಾಪವಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಳಂಬಿಸಿದ್ದು ಯಾಕೆ ?: ಶಶಿ ತರೂರ್

ಐಸಿಸ್‌ನಿಂದ ಅಪಹರಣಕ್ಕೊಳಗಾದ 39 ಭಾರತೀಯರ ಹತ್ಯೆ ಬಗ್ಗೆ ಘೋಷಣೆ ಮಾಡುವಲ್ಲಿ ವಿಳಂಬಿಸಿದೆ ಹಾಗೂ ಅವರ ಕುಟುಂಬದವರಿಗೆ ಹುಸಿ ಭರವಸೆ ನೀಡಿದೆ ಎಂದು ಕೇಂದ್ರ ಸರಕಾರವನ್ನು ಕಾಂಗ್ರೆಸ್ ಖಂಡಿಸಿದೆ. ಇದು ಎಲ್ಲ ಭಾರತೀಯರು ವಿಷಾದಿಸುವ ಘಟನೆ. ಸರಕಾರ ಮಾಹಿತಿ ನೀಡಲು ಯಾಕೆ ವಿಳಂಬಿಸಿತು ಎಂದು ನಾನು ಪ್ರಶ್ನಿಸುತ್ತಿದ್ದೇನೆ. ಇದು ಹೇಗೆ ಸಂಭವಿಸಿತು, ಅವರನ್ನು ಯಾವಾಗ ಹತ್ಯೆ ಮಾಡಲಾಯಿತು ಎಂದು ಹೇಳಬೇಕು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News