ಕೋಮುವಾದ ಒಪ್ಪಲಾಗದು: ಕೇಂದ್ರ ಸಚಿವರ ವಿರುದ್ಧ ನಿತೀಶ್ ಕುಮಾರ್ ಆಕ್ರೋಶ

Update: 2018-03-20 11:05 GMT

ಪಾಟ್ನಾ, ಮಾ.20: ಇಬ್ಬರು ಕೇಂದ್ರ ಸಚಿವರ ಬಗ್ಗೆ ತೀವ್ರ ಅಸಹನೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಘೋಷಿಸಿದ್ದಾರೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಪುನರುಚ್ಚರಿಸಿದ ಅವರು, ಈ ವಿಷಯವನ್ನು ಎಂದೂ ಬಿಟ್ಟಿಲ್ಲ ಎಂದು ಖಂಡತುಂಡವಾಗಿ ಹೇಳಿದರು.

ಇದನ್ನು ಬಿಜೆಪಿಗೆ ಪರೋಕ್ಷ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಲಾಲೂಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್‍ ತೊರೆದ ಬಳಿಕ ನಿತೀಶ್ ಕುಮಾರ್ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರು. "ದಯವಿಟ್ಟು ನೆನಪಿಡಿ; ನಾನು ಭ್ರಷ್ಟಾಚಾರದ ಜತೆ ಹೊಂದಾಣಿಕೆಯನ್ನೂ ಮಾಡಿಕೊಂಡಿಲ್ಲ ಅಥವಾ ಸಮಾಜವನ್ನು ವಿಭಜಿಸುವವರ ಜತೆಗೂ ರಾಜಿ ಮಾಡಿಕೊಂಡಿಲ್ಲ. ನಾನು ಸಾಮಾಜಿಕ ಶಾಂತಿಯ ಪರ. ಪ್ರೀತಿ, ಅನುಕಂಪ ಮತ್ತು ಕೋಮು ಸಾಮರಸ್ಯದಿಂದಷ್ಟೆ ದೇಶ ಮುನ್ನಡೆಯಲು ಸಾಧ್ಯ" ಎಂದು ನಿತೀಶ್ ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ಹಾಗೂ ಎಲ್‍ಜೆಪಿ ನಾಯಕ ರಾಮ್‍ವಿಲಾಸ್ ಪಾಸ್ವಾನ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದ ಅವರು, ದಲಿತರು ಹಾಗೂ ಅಲ್ಪಸಂಖ್ಯಾತರ ಬಗೆಗಿನ ಮನೋಭಾವವನ್ನು ಬದಲಿಸಬೇಕು ಎಂದು ಬಿಜೆಪಿಗೆ ಸಲಹೆ ಮಾಡಿದರು. "ನನಗೆ ಪಾಸ್ವಾನ್ ಚೆನ್ನಾಗಿ ಗೊತ್ತು. ಅವರು ವಿಚಾರಹೀನ ಮಾತುಗಳನ್ನಾಡುವುದಿಲ್ಲ" ಎಂದು ನಿತೀಶ್ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ.

ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಅಶ್ವಿನಿ ಚೌಬೆ ವಿರುದ್ಧ ವಿರೋಧಪಕ್ಷಗಳು ದಿನವಿಡೀ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಿಎಂ ಈ ಹೇಳಿಕೆ ನೀಡಿದ್ದಾರೆ. ಅರಾರಿಯಾ ಉಪಚುನಾವಣೆಯಲ್ಲಿ ಆರ್ ಜೆಡಿ ಅಭ್ಯರ್ಥಿ ಗೆದ್ದಾಗ ಸಿಂಗ್, ಈ ಜಿಲ್ಲೆ ಉಗ್ರರ ತಾಣವಾಗುತ್ತಿದೆ ಎಂದು ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News