ಮಹಿಳೆ ಮೇಲೆ ಆ್ಯಸಿಡ್ ದಾಳಿ

Update: 2018-03-21 04:45 GMT

ಗಾಝಿಯಾಬಾದ್,ಮಾ.21: ಇಲ್ಲಿನ ಮೋಹನ ನಗರದಲ್ಲಿ ಆಟೊದಲ್ಲಿ ಹೋಗುತ್ತಿದ್ದ 23 ವರ್ಷದ ಮಹಿಳೆಯೊಬ್ಬರ ಮೇಲೆ ಬೈಕ್‍ನಲ್ಲಿ ಬಂದ ಇಬ್ಬರು ಆ್ಯಸಿಡ್ ಎರಚಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಮಹಿಳೆಗೆ ತೀವ್ರ ಸುಟ್ಟಗಾಯಗಳಾಗಿದ್ದು, ಇತರ ನಾಲ್ಕು ಮಂದಿ ಸಹ ಪ್ರಯಾಣಿಕರಿಗೆ ಕೂಡಾ ಸುಟ್ಟ ಗಾಯಗಳಾಗಿವೆ. ತನ್ನ ಸ್ನೇಹವನ್ನು ಬಿಡದಂತೆ 25 ವರ್ಷದ ಮಹಿಳೆಯೊಬ್ಬಳು ಸಂತ್ರಸ್ತ ಮಹಿಳೆಯನ್ನು ಪೀಡಿಸುತ್ತಿದ್ದಳು ಎನ್ನಲಾಗಿದ್ದು, ಈಕೆಯ ಕಡೆಯವರೇ ಈ ಕೃತ್ಯ ಎಸಗಿರಬೇಕು ಎಂದು ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರು ದೆಹಲಿಯ ಸಪ್ಧರ್‍ಜಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಮುಖದಲ್ಲಿ ಶೇಕಡ 25ರಷ್ಟು ಸುಟ್ಟಗಾಯಗಳಿದ್ದು, ಸ್ಥಿತಿ ಚಿಂತಾಜನಕವಾಗಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಯ ಕಣ್ಣಿಗೆ ಯಾವುದೇ ಗಾಯಗಳಾಗಿವೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ವಕ್ತಾರೆ ಪೂನಂ ದಂಡಾ ಹೇಳಿದ್ದಾರೆ.

ಸಂತ್ರಸ್ತ ಮಹಿಳೆ ವಿಮಾ ಕಂಪನಿಯೊಂದರಲ್ಲಿ ಮಾರಾಟ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. "ಆಟೊದಲ್ಲಿ ಎಡಬದಿಯಲ್ಲಿ ಕುಳಿತಿದ್ದ ಮಹಿಳೆಯತ್ತ ಕಪ್ಪು ಬೈಕಿನಲ್ಲಿ ಬಂದ ಇಬ್ಬರು ಪ್ಲಾಸ್ಟಿಕ್ ಚೀಲದಲ್ಲಿದ್ದ ಆ್ಯಸಿಡ್ ಎಸೆದು ಪರಾರಿಯಾದರು ಎಂದು ಸಹಪ್ರಯಾಣಿಕ ರಾಹುಲ್ ಕುಮಾರ್ ಹೇಳಿದ್ದಾರೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 326 ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಎಫ್‍ಐಆರ್ ನಲ್ಲಿ ಸಂತ್ರಸ್ತೆಯ ಮಾಜಿ ಸಹೋದ್ಯೋಗಿ ಯುವತಿಯನ್ನು ಹೆಸರಿಸಲಾಗಿದೆ. ಇಬ್ಬರ ನಡುವಿನ ಸ್ನೇಹಸಂಬಂಧ ಹದಗೆಟ್ಟ ಬಳಿಕ, ಸಂತ್ರಸ್ತೆ ಯುವತಿ ಬೇರೆ ಉದ್ಯೋಗಕ್ಕೆ ಸೇರಿದ್ದಳು. ಇದೇ ದ್ವೇಷಕ್ಕೆ ಕಾರಣವಿರಬೇಕು ಎಂದು ಕುಟುಂಬದವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News