ಐಸಿಸ್ ಉಗ್ರರು 39 ಭಾರತೀಯರನ್ನು ಹತ್ಯೆ ಮಾಡಿದ್ದನ್ನು ಇರಾಕ್ ಪತ್ತೆ ಮಾಡಿದ್ದು ಹೇಗೆ?

Update: 2018-03-21 05:26 GMT

ಬಾಗ್ದಾದ್,ಮಾ.21: ಐಸಿಸ್ ಉಗ್ರರು 39 ಮಂದಿ ಭಾರತೀಯ ಕಟ್ಟಡ ಕಾರ್ಮಿಕರನ್ನು ಅಪಹರಿಸಿ ಹತ್ಯೆ ಮಾಡಿದ ಕೃತ್ಯವನ್ನು ಹಾಗೂ ಸಾಮೂಹಿಕವಾಗಿ ಅವರನ್ನು ಸಮಾಧಿ ಮಾಡಿದ್ದನ್ನು ಇರಾಕ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

2014ರಲ್ಲಿ ಉತ್ತರ ಇರಾಕ್‍ನ ಮೊಸುಲ್ ನಗರವನ್ನು ವಶಪಡಿಸಿಕೊಳ್ಳುವ ವೇಳೆ ಈ ಕೃತ್ಯ ಎಸಗಲಾಗಿತ್ತು. ಬದೂಷಾ ಗ್ರಾಮದ ಬಳಿ ಎಲ್ಲ ಮೃತದೇಹಗಳನ್ನು ಸಮಾಧಿ ಮಾಡಲಾಗಿದೆ. ಈ ಪ್ರದೇಶವನ್ನು ಇರಾಕಿ ಪಡೆಗಳು ಕಳೆದ ವಾರ ಮತ್ತೆ ವಶಕ್ಕೆ ಪಡೆದಿದ್ದವು.

"ಈ ಹತ್ಯೆ ಯದೇಷ್ ಉಗ್ರರ ಗುಂಪಿನ ಹೇಯ ಕೃತ್ಯ" ಎಂದು ಇರಾಕಿ ಅಧಿಕಾರಿ ನಜೀಹ ಅಬ್ದುಲ್ ಅಮೀರ್ ಅಲ್ ಶಿಮರಿ ತಿಳಿಸಿದರು. ಯದೇಷ್ ಎನ್ನುವುದು ಐಸಿಸ್ನ ಅರೇಬಿಕ್ ಗುಂಪಾಗಿದೆ. "ಸ್ನೇಹರಾಷ್ಟ್ರವಾದ ಭಾರತದ ನಾಗರಿಕರನ್ನು ಹತ್ಯೆ ಮಾಡಲಾಗಿದೆ. ಅವರ ಗೌರವವನ್ನು ವಾಸ್ತವವಾಗಿ ಕಾಪಾಡಬೇಕಿತ್ತು. ಆದರೆ ದುಷ್ಟಶಕ್ತಿಗಳು ಇಸ್ಲಾಂನ ತತ್ವಗಳಿಗೆ ಅಗೌರವ ತರುವ ಕೃತ್ಯ ಮಾಡಿವೆ" ಎಂದು ಇರಾಕಿನ ಹುತಾತ್ಮರ ವಿಭಾಗದ ಮುಖ್ಯಸ್ಥ ನಜೀಹಾ ತಿಳಿಸಿದ್ದಾರೆ.

ಐಸಿಸ್ ಉಗ್ರರ ವಿರುದ್ಧದ ಹೋರಾಟದಲ್ಲಿ ಮೃತಪಟ್ಟವರ ವಿಚಾರದಲ್ಲಿ ಈ ಇಲಾಖೆ ಕಾರ್ಯ ನಿರ್ವಹಿಸುತ್ತದೆ.
2014ರಲ್ಲಿ ನಗರವನ್ನು ವಶಪಡಿಸಿಕೊಂಡಾಗ ಉಗ್ರರು 39 ಮಂದಿ ಭಾರತೀಯ ಕಟ್ಟಡ ಕಾರ್ಮಿಕರನ್ನು ಅಪಹರಿಸಿದ್ದರು. ಐದು ದಿನಗಳ ಬಳಿಕ ಐದು ಮಂದಿ ಕೆಲಸಗಾರರ ಕುಟುಂಬದಿಂದ ನೆರವು ಕೋರಿ ಕರೆ ಬಂದಿತ್ತು. ಆಗ ಇರಾಕ್‍ನಲ್ಲಿ ಸುಮಾರು 10 ಸಾವಿರ ಭಾರತೀಯರು ಕಾರ್ಯ ನಿರ್ವಹಿಸುತ್ತಿದ್ದರು.ಉಗ್ರರು ವಶಪಡಿಸಿಕೊಂಡ ಪ್ರದೇಶದಲ್ಲಿ ಹಲವಾರು ಸಮೂಹ ಸಮಾಧಿಗಳು ಪತ್ತೆಯಾಗಿವೆ. ಅವುಗಳಲ್ಲಿ ಹಲವನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇನ್ನೂ ಹಲವನ್ನು ಪರಿಶೀಲಿಸಲು ಸಂಪನ್ಮೂಲ ಹಾಗೂ ತರಬೇತಿ ಪಡೆದ ಸಿಬ್ಬಂದಿಯ ಕೊರತೆ ಇದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸಾಮೂಹಿಕ ಸಮಾಧಿಯನ್ನು ರಾಡಾರ್ ನೆರವಿನಿಂದ ಪತ್ತೆ ಮಾಡಿ, ದೇಹಗಳನ್ನು ಹೊರತೆಗೆಯಲಾಗಿತ್ತು. ಬಳಿಕ ಭಾರತೀಯ ಅಧಿಕಾರಿಗಳು ಮೃತರ ಸಂಬಂಧಿಕರಿಗೆ ಡಿಎನ್‍ಎ ಮಾದರಿಗಳನ್ನು ಕಳುಹಿಸಿ, ಡಿಎನ್‍ಎ ವಿಶ್ಲೇಷಣೆಯಿಂದ ಇದು ಭಾರತೀಯರ ದೇಹಗಳೇ ಎನ್ನುವುದನ್ನು ದೃಢಪಡಿಸಿಕೊಂಡಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯಸಭೆಗೆ ತಿಳಿಸಿದ್ದಾರೆ.

ದೇಹಗಳ ಕಳೇಬರಹವನ್ನು ಸದ್ಯದಲ್ಲೇ ಭಾರತಕ್ಕೆ ಕಳುಹಿಸಲಾಗುವುದು ಎಂದು ಇರಾಕ್‍ನಲ್ಲಿ ಭಾರತದ ರಾಯಭಾರಿಯಾಗಿರುವ ಪ್ರದೀಪ್‍ಸಿಂಗ್ ರಾಜಪುರೋಹಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News