ಬಿಜೆಪಿ ಸೇರಲಿರುವ ಪ್ರಭಾವಿ ಕಾಂಗ್ರೆಸ್ ನಾಯಕ ಯಾರು?: ಈ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು?

Update: 2018-03-21 07:43 GMT

ಬೆಂಗಳೂರು, ಮಾ.21: ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ನಾಯಕರೊಬ್ಬರು ಹಾಗು ಅವರ ಪುತ್ರ ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಮಾ.23ರಂದು ವೀರಶೈವ ಲಿಂಗಾಯತ ಮಹಾಸಭಾದ ಮಹತ್ವದ ಸಭೆ ನಡೆಯಲಿದೆ. ಆ ನಂತರದ ದಿನಗಳಲ್ಲಿ ಅವರು ಬಿಜೆಪಿ ಸೇರಲಿದ್ದಾರೆ. ಈ ಸಭೆಯಲ್ಲಿ ಸಮುದಾಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿ ಪಕ್ಷಾಂತರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಮಾ.26ರಂದು ಇವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಪ್ರಭಾವಿ ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಮಾಧ್ಯಮಗಳಿಂದ ನಾವು ಯಾವುದನ್ನೂ‌ ಮುಚ್ಚಿಟ್ಟಿಲ್ಲ. ನೀವು ಊಹೆ ಮಾಡಲೂ ಸಾಧ್ಯವಾಗ ನಾಯಕರು ಬಿಜೆಪಿ ಸೇರುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಬಿಜೆಪಿಗೆ?: 'ಲಿಂಗಾಯತ ಸ್ವತಂತ್ರ ಧರ್ಮದ ಶಿಫಾರಸ್ಸಿನಲ್ಲಿ ಬಸವತತ್ವ ಒಪ್ಪಿ ಬರುವ ವೀರಶೈವ ಬಿಜೆಪಿ ಸೇರಲಿದ್ದಾರೆ' ಎಂದು ಯಡಿಯೂರಪ್ಪ ಹೇಳಿರುವುದರಿಂದ ಶಾಮನೂರು ಶಿವಶಂಕರಪ್ಪ ಹಾಗು ಎಸ್.ಎಸ್. ಮಲ್ಲಿಕಾರ್ಜುನ್ ಬಿಜೆಪಿ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಅಸಮಾಧಾನ ಹೊಂದಿದ್ದು, ಈ ಬಗ್ಗೆ ಯಡಿಯೂರಪ್ಪ, ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News