ರಾಜ್ಯಾದ್ಯಂತ ಮಾ.23ರಿಂದ ಎಸೆಸೆಲ್ಸಿ ಪರೀಕ್ಷೆ
ಬೆಂಗಳೂರು, ಮಾ.21: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳು ಮಾ.23ರಿಂದ ಆರಂಭಗೊಂಡು ಎ.6 ರವರೆಗೆ ನಡೆಯುತ್ತದೆ. ರಾಜ್ಯಾದ್ಯಂತ 8.54 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಗಳು ಪೂರ್ಣಗೊಂಡಿದ್ದು, ಎಸೆಸೆಲ್ಸಿ ಪರೀಕ್ಷೆಗಳಿಗೆ ಶಿಕ್ಷಣ ಇಲಾಖೆ ಪೂರ್ವ ತಯಾರಿ ಕೈಗೊಂಡಿದೆ. ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ಬಾರಿಗೆ ಎಸ್‌ಎಟಿಎಸ್ ಮೂಲಕ ಆನ್‌ಲೈನ್‌ನಲ್ಲಿ ಸಂಗ್ರಹಿಸಲಾದ ಮಾಹಿತಿಯಂತೆ ಪರೀಕ್ಷಾರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅದರಂತೆ ರಾಜ್ಯದಲ್ಲಿ 14,385 ಪ್ರೌಢ ಶಾಲೆಗಳಿದ್ದು, 2817 ಶಾಲೆಗಳನ್ನು ಪರೀಕ್ಷಾ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದೆ.
ಅದರಲ್ಲಿ 1011 ಕ್ಲಸ್ಟರ್ ಕೇಂದ್ರಗಳು, 1807 ಕ್ಲಸ್ಟರ್ ರಹಿತ ಕೇಂದ್ರಗಳು, 45 ಸೂಕ್ಷ್ಮ ಹಾಗೂ 23 ಅತೀ ಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿದೆ. ಶಾಲಾ ಮುಖ್ಯಶಿಕ್ಷಕರು ಪ್ರವೇಶ ಪತ್ರಗಳನ್ನು ಆನ್‌ಲೈನ್ ಮೂಲಕ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಿ, ಅನಂತರ ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ.
ಪರೀಕ್ಷೆಗಳನ್ನು ಯಾವುದೇ ಸಮಸ್ಯೆಯಿಲ್ಲದೆ ಹಾಗೂ ಸುರಕ್ಷಿತವಾಗಿ ನಡೆಸುವ ಸಲುವಾಗಿ 21 ರಾಜ್ಯ ಹಾಗೂ ವಿಭಾಗೀಯ ಮಟ್ಟದ ಅಧಿಕಾರಿಗಳನ್ನು ಜಿಲ್ಲಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ. 406 ಡಯಟ್ ಉಪನ್ಯಾಸಕರು, ಹಿರಿಯ ಉಪನ್ಯಾಸಕರನ್ನು ಜಾಗೃತದಳದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. 34 ಡಯಟ್ ಪ್ರಾಂಶುಪಾಲರನ್ನು ಕರ್ತವ್ಯ ನಿರ್ವಹಿಸುವ ಜಿಲ್ಲೆಯಲ್ಲಿಯೇ ಜಿಲ್ಲಾ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 306 ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಉಪ ನಿರ್ದೇಶಕರು, ಶಿಕ್ಷಣಾಧಿಕಾರಿಗಳು ಹಾಗೂ ಉಪ ಯೋಜನಾ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ರಚಿಸಿರುವ ಜಿಲ್ಲಾ ವೀಕ್ಷಣಾ ದಳವು ಕಾರ್ಯನಿರ್ವಹಿಸಲಿದೆ.
609 ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ವಿಚಕ್ಷಣ ಜಾಗೃತದಳ ಪರೀಕ್ಷಾ ಸಮಯದಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ಅಲ್ಲದೆ, ಪ್ರತಿ 2817 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಸ್ಥಾನಿಕ ಜಾಗೃತ ದಳವನ್ನು ನೇಮಕ ಮಾಡಲಾಗಿದೆ ಎಂದು ಶಿಕ್ಷಣ ಮಂಡಳಿ ತಿಳಿಸಿದೆ.
ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ 2 ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಸಿಬ್ಬಂದಿ ಹಾಗೂ ವೀಕ್ಷಣಾ ದಳದ ಎಲ್ಲ ಸದಸ್ಯರಿಗೂ ಗುರುತಿನ ಚೀಟಿ ಮತ್ತು ಟ್ಯಾಗ್‌ಗಳನ್ನು ನೀಡಲಾಗಿದೆ. ಅಲ್ಲದೆ, ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲರಿಗೂ ಮೊಬೈಲ್ ಬಳಸುವುದು ನಿಷೇಧ ಮಾಡಲಾಗಿದೆ. ಜೊತೆಗೆ, ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನಿಡುವ ಭದ್ರತಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷೆ ಸಮಯದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಹಾಗೂ ವಿಷಯಾಧಾರಿತ ಸಮಸ್ಯೆಗಳ ಕುರಿತ ಪರಿಹಾರಕ್ಕಾಗಿ ಇಲಾಖೆಯ ಕಚೇರಿಯಲ್ಲಿ ದೂರವಾಣಿ ಸಂಖ್ಯೆ ಕಾರ್ಯನಿರ್ವಹಿಸುತ್ತಿದ್ದು, 080-23310075 ಅಥವಾ 23310076 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 8,54,424 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅದರಲ್ಲಿ ಹೊಸದಾಗಿ 7,60,271 ವಿದ್ಯಾರ್ಥಿಗಳು, ಪುನರಾವರ್ತಿತವಾಗಿ 70,253 ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ 23,199 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಶಿಕ್ಷಣ ಮಂಡಳಿ ಪ್ರಕಟಿಸಿದೆ.