ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಬಿಜೆಪಿ ಸೇರ್ಪಡೆ
ಬೆಂಗಳೂರು, ಮಾ. 21: ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಮಧುಗಿರಿ ಮಾಜಿ ಶಾಸಕ ಗಂಗಹನುಮಯ್ಯ, ಮಾಜಿ ಸಚಿವ ವೆಂಕಟರಮಣಪ್ಪ ಪುತ್ರ ಕುಮಾರಸ್ವಾಮಿ ಬಿಜೆಪಿಗೆ ಸೇರ್ಪಡೆಯಾದರು.
ಬುಧವಾರ ಇಲ್ಲಿನ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈ ಮೂರು ಮಂದಿ ನಾಯಕರಿಗೆ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಮುಂದಿನ ಚುನಾವಣೆಯಲ್ಲಿ ನಡಹಳ್ಳಿ (ದೇವರಹಿಪ್ಪರಗಿ), ಗಂಗಹನುಮಯ್ಯ(ಮಧುಗಿರಿ), ಮಾಜಿ ಸಚಿವ ವೆಂಕಟರಮಣಪ್ಪ ಪುತ್ರ ಕುಮಾರಸ್ವಾಮಿಗೆ ಪಾವಗಡ ಕ್ಷೇತ್ರದಿಂದ ಟಿಕೆಟ್ ನೀಡಲು ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ಟಿಕೆಟ್ ಹಂಚಿಕೆಯಲ್ಲಿ ನಿರ್ಲಕ್ಷ್ಯ : ಈ ವೇಳೆ ಮಾತನಾಡಿದ ಎ.ಎಸ್. ಪಾಟೀಲ್ ನಡಹಳ್ಳಿ, ನಾನು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದೆ. ಆದರೆ, ಆ ಪಕ್ಷದ ಸದಸ್ಯನೇ ಆಗಿರಲಿಲ್ಲ. ಎಚ್‌ಡಿಕೆ ಜತೆ ಪಕ್ಷ ಕಟ್ಟಲು ಹೊರಟಿದ್ದೆ. ಆದರೆ, ಟಿಕೆಟ್ ಹಂಚಿಕೆಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದರು ಎಂದು ದೂರಿರು.
ದೇವರಹಿಪ್ಪರಗಿ ಕ್ಷೇತ್ರ ನನ್ನ ತಾಯಿ. ಆ ಕ್ಷೇತ್ರವನ್ನು ಕಟ್ಟಿದ್ದು ನಾನು. ಅಲ್ಲಿ ಕೇಳಲಿಕ್ಕೆ ನನಗೆ ಹಕ್ಕಿದೆ. ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡಬಹುದು. ಆದರೆ, ಗಂಡ-ಹೆಂಡತಿ ಸ್ಪರ್ಧೆ ಮಾಡಬಾರದು ಎಂದರೆ ಹೇಗೆ ಎಂದು ನಡಹಳ್ಳಿ ತೀಕ್ಷ್ಣವಾಗಿ ಪ್ರಶ್ನಿಸಿದರು.