ಶಾಸಕರ ಅನರ್ಹತೆ ವಿಚಾರದ ಬಗ್ಗೆ ಸ್ಪೀಕರ್ ಮನಸ್ಸಿನಲ್ಲೇನಿದೆ ಗೊತ್ತಿಲ್ಲ: ದೇವೇಗೌಡ
ಬೆಂಗಳೂರು, ಮಾ. 21: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಜೆಡಿಎಸ್‌ನ ಏಳು ಮಂದಿ ಶಾಸಕರ ಅನರ್ಹತೆ ವಿಚಾರದ ಬಗ್ಗೆ ವಿಧಾನಸಭಾ ಸ್ಪೀಕರ್ ಮನಸ್ಸಿನಲ್ಲೆನಿದೆ ಎಂದು ನಾನು ಹೇಳಲು ಆಗುವುದಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಹೊಸದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ತೀರ್ಪು ಹಾಗೂ ಕೋರ್ಟಿನಲ್ಲಿ ಏನಾಗುತ್ತದೆಯೋ ನೋಡೋಣ. ಆದರೆ, ಈ ರೀತಿ ಯಾರೂ ತಪ್ಪು ಮಾಡಬಾರದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಂಡಾಯ ಶಾಸಕರಿಗೆ ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಿದ್ದು, ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿರಲಿಲ್ಲ. ಈ ಮಧ್ಯೆ ತಪ್ಪೊಪ್ಪಿಕೊಂಡ ಕೆ.ಗೋಪಾಲಯ್ಯ ಪಕ್ಷಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಸ್ಪರ್ಧೆಗೆ ನನ್ನ ಅಭ್ಯಂತರವಿಲ್ಲ: ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನನ್ನ ಅಭ್ಯಂತರವಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ದಿಸಲು ಸೂಕ್ತ ಅಭ್ಯರ್ಥಿಗಳಿಲ್ಲ. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಚನಪಟ್ಟಣದಲ್ಲಿ ಸ್ಪರ್ಧಿಸಲು ಪಕ್ಷದಿಂದ ಯಾವುದೇ ತಡೆ ಇಲ್ಲ. ನಾನೂ ಈ ಹಿಂದೆ ಸಾತನೂರು ಮತ್ತು ಹೊಳೆನರಸೀಪುರದಿಂದ ಸ್ಪರ್ಧೆ ಮಾಡಿದ್ದೆ ಎಂದು ಸ್ಮರಿಸಿದರು.
‘ಕಾವೇರಿ ನದಿ ನೀರಿನ ಹಂಚಿಕೆ ಕುರಿತ ನಾಳಿನ ಸಭೆಗೆ ತಾನು ಹೋಗುತ್ತೇನೆ. ಕೇಂದ್ರ ಸಚಿವರು ಈ ಸಭೆಯಲ್ಲಿದ್ದರೆ ಒಳ್ಳೆಯದು. ಏಕೆಂದರೆ ಈಗ ಕಾವೇರಿ ವಿಷಯ ಕೇಂದ್ರ ಸರಕಾರದ ಅಂಗಳದಲ್ಲಿದೆ. ಲೋಕಸಭೆ ಅಧಿವೇಶನ ಇರುವುದರಿಂದ ಬಿಜೆಪಿ ಸಂಸದರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ನಾನು ಒಂದು ಸ್ಕೀಂ ಮಾಡಿಕೊಟ್ಟಿದ್ದೇನೆ, ತಮಿಳುನಾಡಿನ ಎಲ್ಲ ಪಕ್ಷದ ಸಂಸದರು ಒಗ್ಗಟ್ಟಾಗಿದ್ದಾರೆ, ರಾಜ್ಯದ ಸಂಸದರು ಒಗ್ಗಟ್ಟಾಗಬೇಕಿದೆ’
-ಎಚ್.ಡಿ.ದೇವೇಗೌ ಮಾಜಿ ಪ್ರಧಾನಿ