×
Ad

ಸೈಬರ್ ಕಾನೂನುಗಳ ಬಗ್ಗೆ ಜಾಗೃತಿ ಅಗತ್ಯ: ಡಾ.ಎಚ್.ಎಂ.ಚಂದ್ರಶೇಖರ್

Update: 2018-03-21 20:57 IST

ಬೆಂಗಳೂರು, ಮಾ.21: ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಸಾರ್ವಜನಿಕರು ಸೈಬರ್ ಕಾನೂನುಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಸಿಲಿಕಾನ್‌ಸಿಟಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಚ್.ಎಂ.ಚಂದ್ರಶೇಖರ್ ಕರೆ ನೀಡಿದ್ದಾರೆ.

ನಗರದ ಕೆ.ಆರ್.ಪುರದಲ್ಲಿರುವ ಸಿಲಿಕಾನ್‌ಸಿಟಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಸೈಬರ್ ಸ್ಪೇಸ್-ವಿಚಾರ ಹಾಗೂ ಸವಾಲುಗಳು’ ಎಂಬ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಸೈಬರ್‌ಗೆ ಸಂಬಂಧಿಸಿದಂತೆ ಕಾನೂನುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಸಂದೇಶಗಳನ್ನು ಪರಿಶೀಲಿಸದೆ ಮತ್ತೊಬ್ಬರಿಗೆ ರವಾನಿಸಬಾರದು. ಕೆಲವೊಮ್ಮೆ ಈ ರೀತಿಯ ತಪ್ಪುಗಳಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದು ಚಂದ್ರಶೇಖರ್ ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಗರದ ಗುಪ್ತಚರ ವಿಭಾಗದ ಡಿಎಸ್ಪಿ ಬಾಬು ಆಂಜಿನಪ್ಪ ಮಾತನಾಡಿ, ಅಂತರ್ಜಾಲದಲ್ಲಿ ನಡೆಯತ್ತಿರುವ ಅಪರಾಧಗಳು ಅತ್ಯಂತ ವ್ಯಾಪಕವಾಗಿದ್ದು ಇದು ಸಾರ್ವಜನಿಕರನ್ನು ಪರೋಕ್ಷವಾಗಿ ಅತ್ಯಂತ ಗಾಢವಾಗಿ ಪ್ರಭಾವಿಸುತ್ತಿದೆ ಎಂದರು.

ತಮಗೆ ಸಂಬಂಧಪಟ್ಟ ವಿಷಯವಾಗಿರಲಿ ಅಥವಾ ಆಗದಿರಲಿ ಸಾರ್ವಜನಿಕರು ಅನಗತ್ಯವಾಗಿ ಅದರೊಳಗೆ ನೇರವಾಗಿ ಪಾಲುದಾರರಾಗುತ್ತಿದ್ದಾರೆ. ಕೆಲವೇ ಸೆಕೆಂಡುಗಳ ಅಂತರದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಸಂದೇಶಗಳ ಸತ್ಯಾಸತ್ಯತೆಗಳನ್ನು ಅರಿತು ಜನ ನಡೆದುಕೊಳ್ಳದಿದ್ದರೆ ಅನರ್ಥಗಳೇ ಸಂಘಟಿಸುತ್ತವೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವೀಟರ್, ವಾಟ್ಸ್‌ಆಪ್‌ಗಳಲ್ಲಿ ಹರಡುತ್ತಿರುವ ಸಂದೇಶಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು ಮತ್ತು ಆದಷ್ಟು ಇವು ವೈಯಕ್ತಿಕವಾಗಿರಲಿ ಹಾಗೂ ಸಂದೇಶಗಳು ಸಾರ್ವಜನಿಕವಾದಾಗ ಅವುಗಳನ್ನು ಪರಿಶೀಲಿಸಿಯೇ ಮತ್ತೊಬ್ಬರಿಗೆ ಹರಡಬೇಕೆಂದು ಬಾಬು ಆಂಜಿನಪ್ಪ ಕಳಕಳಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ‘ಸೈಬರ್ ಸ್ಪೇಸ್-ಇಶ್ಯೂಸ್ ಅಂಡ್ ಚಾಲೆಂಜೆಸ್’ ವಿಷಯಕ್ಕೆ ಸಂಬಂಧಿಸಿದ ಅಧ್ಯಯನಗಳನ್ನು ಒಳಗೊಂಡ ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಐಪಿ ಸಾಫ್ಟ್‌ವೇರ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಸುದರ್ಶನ್, ಸಿಲಿಕಾನ್ ಸಿಟಿ ಕಾಲೇಜಿನ ಸಂಶೋಧನಾ ನಿರ್ದೇಶಕಿ ಡಾ.ರೋಸ್ ಕವಿತಾ, ಪ್ರಾಂಶುಪಾಲ ಜ್ಞಾನೇಶ್, ಪಿಯು ಕಾಲೇಜು ಪ್ರಾಂಶುಪಾಲೆ ಆದಿಲಕ್ಷ್ಮಿ, ವಿವಿಧ ರಾಜ್ಯಗಳಿಂದ 155 ಕಾಲೇಜುಗಳಿಂದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News