ಕಾಲಮಿತಿ ಉದ್ಯೋಗ ನೀತಿಗೆ ಎಐಟಿಯುಸಿ ವಿರೋಧ
ಬೆಂಗಳೂರು, ಮಾ.21: ದೇಶದ ಎಲ್ಲ ಉದ್ಯೋಗ ಕ್ಷೇತ್ರಗಳಲ್ಲೂ ಕಾಲಮಿತಿ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸಲು ಮುಂದಾಗಿದೆ ಎಂದು ಎಐಟಿಯುಸಿ ಆರೋಪಿಸಿದೆ.
ಕೇಂದ್ರ ಕೈಗಾರಿಕಾ ಉದ್ಯೋಗ ನಿಯಮಗಳಲ್ಲಿ ತಿದ್ದುಪಡಿ ತಂದು ಇರುವ ಉದ್ಯೋಗಕ್ಕೂ ಅಭದ್ರತೆ ಸೃಷ್ಟಿಸಲು ಕೇಂದ್ರ ಸರಕಾರ ಹೊರಟಿದೆ. ಕಾಲಮಿತಿ ಉದ್ಯೋಗವು ಬಂಡವಾಳಶಾಹಿಗಳಿಗೆ ಕಾರ್ಮಿಕರ ಮೇಲೆ ಮತ್ತಷ್ಟು ಹಿಡಿತ ಸಾಧಿಸಲು ಅನುಕೂಲ ಆಗಲಿದೆ. ಇದರಿಂದ ದೇಶದ ಕಾರ್ಮಿಕರ ಮೇಲಿನ ಶೋಷಣೆ ದ್ವಿಗುಣಗೊಳ್ಳಲಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹರಿಗೋವಿಂದ ತಿಳಿಸಿದರು.
ಕಾಲ ಮಿತಿ ಕಾನೂನು ಜಾರಿಯಾದರೆ ಕಾರ್ಮಿಕರು ತಮ್ಮ 30 ವರ್ಷದ ಸೇವಾವಧಿಯಲ್ಲಿ ಸುಮಾರು 10 ಬಾರಿ ಕೆಲಸ ಹುಡುಕುವ ಸಂದರ್ಭ ಸೃಷ್ಟಿಯಾಗುವುದು. ಇದರಿಂದ ಅವರ ಸೇವಾವದಿಯ ಕೊನೆಯಲ್ಲಿ ಪಡೆಯುವ ಸಾಮಾಜಿಕ ಭದ್ರತೆ (ಪಿಂಚಣಿ, ಭವಿಷ್ಯ ನಿಧಿ, ಗ್ರಾಚ್ಯುಯಿಟಿ ಇತ್ಯಾದಿ) ಕಡಿಮೆಯಾಗಲಿದೆ. ಅಲ್ಲದೆ ಇಂತಹ ತಿದ್ದುಪಡಿಯಿಂದ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುವುದು ಎಂದು ಅವರು ಹೇಳಿದರು.
ನಮ್ಮ ದೇಶದ ಕಾರ್ಮಿಕ ವರ್ಗದಲ್ಲಿ ಇಂದು ಕೇವಲ ಶೇ.7ರಷ್ಟು ಮಾತ್ರ ಸಂಘಟಿತ ವಲಯದ ಕಾರ್ಮಿಕರಿದ್ದಾರೆ. ಈ ತಿದ್ದುಪಡಿಯಿಂದ ಈ ಸಣ್ಣ ಪ್ರಮಾಣದ ಸಂಘಟಿತ ವಲಯದ ಕಾರ್ಮಿಕರಿಗೂ ಸಹ ಕಾನೂನಿನ ರಕ್ಷಣೆಯಿಲ್ಲದೆ ಅಸಂಘಟಿತರಾಗುತ್ತಾರೆ. ಹೀಗಾಗಿ ಯಾವುದೆ ಕಾರಣಕ್ಕೂ ಕಾಲಮಿತಿ ಉದ್ಯೋಗದ ನಿಯಮ ಜಾರಿಯಾಗಬಾರದೆಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ಒತ್ತಾಯಿಸಿದರು.
ಎ.2ರಂದು ಪ್ರತಿಭಟನೆ
ಕಾಲಮಿತಿ ಉದ್ಯೋಗ ನಿಯಮವನ್ನು ಕೇಂದ್ರ ಸರಕಾರ ಕೂಡಲೆ ಈ ತಿದ್ದುಪಡಿಯನ್ನು ಹಿಂಪಡಿಯಬೇಕೆಂದು ಒತ್ತಾಯಿಸಿ ಎ.2 ಸೋಮವಾರದಂದು ಎಐಟಿಯುಸಿ ಬೆಂಗಳೂರು ಜಿಲ್ಲಾ ಮಂಡಳಿಯು ಕಾರ್ಮಿಕ ಆಯುಕ್ತರ ಕಚೇರಿಯ ಬಳಿ (ಡೈರಿ ವೃತ್ತದ ಬಳಿ) ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.