ಬೆಂಗಳೂರು: ರಸ್ತೆ ವಿಭಜಕಕ್ಕೆ ಬೈಕ್ ಢಿಕ್ಕಿ; ಕೂಲಿ ಕಾರ್ಮಿಕ ಮೃತ್ಯು
ಬೆಂಗಳೂರು, ಮಾ.21: ವೇಗವಾಗಿ ಸಾಗುತ್ತಿದ್ದ ಬೈಕ್ ಸವಾರನೊಬ್ಬ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಚಿಕ್ಕಲಸಂದ್ರ ನಿವಾಸಿ ಪುರುಷೋತ್ತಮ್ ನಾಯ್ಡು(36) ಎಂಬುವರು ಘಟನೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸ್ನೇಹಿತರ ಜೊತೆ ಬನಶಂಕರಿ 6ನೆ ಹಂತದ ನೈಸ್ ರಸ್ತೆ ಬಳಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮದ್ಯಪಾನ ಮಾಡಿ ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮದ್ಯದ ಅಮಲಿನಲ್ಲಿದ್ದ ಪುರುಷೋತ್ತಮ್ ಬೈಕ್‌ನ್ನು ಅಡ್ಡಾದಿಡ್ಡಿ ಓಡಿಸುತ್ತ ಆಯತಪ್ಪಿಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಆಂಧ್ರಪ್ರದೇಶ ಮೂಲದ ನಾಯ್ಡು, ಗಾರೆ ಕೆಲಸ ಮಾಡಿಕೊಂಡು ಚಿಕ್ಕಲಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.