ಬಿಜೆಪಿ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ ಕಾಂಗ್ರೆಸ್
ಬೆಂಗಳೂರು, ಮಾ.21: ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ ‘ಬೆಂಗಳೂರು ರಕ್ಷಿಸಿ’ ಯಾತ್ರೆಗೆ ತಿರುಗೇಟು ನೀಡಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷವು ‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಪಾದಯಾತ್ರೆಗೆ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಭರ್ಜರಿ ಚಾಲನೆ ನೀಡಿದೆ.
ಬುಧವಾರ ನಗರದ ಕೆ.ಆರ್.ಪುರದಲ್ಲಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡಿದ ಬಳಿಕ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ಆಡಳಿತದಲ್ಲಿ ಬಿಬಿಎಂಪಿಯಲ್ಲಿ ನಡೆಸಿರುವ ಅಕ್ರಮಗಳ ಬಗ್ಗೆ ತನಿಖಾ ವರದಿ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಜೆಪಿ ಸರಕಾರದಲ್ಲಿ ಕಾನೂನು ಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದರು. ಆದರೆ, ನಮ್ಮ ಮುಖ್ಯಮಂತ್ರಿ ಒಂದೇ ಒಂದು ಇಂಚು ಡಿನೋಟಿಫಿಕೇಷನ್ ಮಾಡಿಲ್ಲ. 2008ರಲ್ಲಿ 110 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ತನ್ನ ದುರಾಡಳಿತದಿಂದ 2013ರಲ್ಲಿ 40 ಸ್ಥಾನಕ್ಕೆ ಕುಸಿಯಿತು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಇಡೀ ದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆಯುತ್ತಿದೆ. ರಾಜಧಾನಿ ಬೆಂಗಳೂರು ವಿಶ್ವದ ಅತ್ಯಂತ ಕ್ರಿಯಾಶೀಲ ನಗರ, ಜನಸಾಮಾನ್ಯರು ಬದುಕಲು ಯೋಗ್ಯವಿರುವ ಅಗ್ಗದ ನಗರ ಎಂಬ ಖ್ಯಾತಿಯನ್ನು ಪಡೆದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಸಮ್ಮಿಶ್ರ ಸರಕಾರ ಸೇರಿದಂತೆ ಒಟ್ಟು 7 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಬೆಂಗಳೂರು ನಗರಕ್ಕೆ ಯಾವ ಕೊಡುಗೆಯನ್ನು ನೀಡಿಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಅವರಿಗೆ ಬೆಂಗಳೂರಿನ ನೆನಪು ಬಂದಿದೆ ಎಂದು ಅವರು ಹೇಳಿದರು.
ಬಿಜೆಪಿ ವಿರುದ್ಧ ನಾವು ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನಲ್ಲಿ ಅವರ ಆಡಳಿತಾವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಾರೆ. ನಾವು ಅಂಕಿ ಅಂಶಗಳ ಸಮೇತ ಅವರ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರವನ್ನು ಜನತೆಯ ಮುಂದಿಡುತ್ತೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿಯವರು ಬಿಬಿಎಂಪಿಯಲ್ಲಿ 8500 ಕೋಟಿ ರೂ.ಸಾಲ ಮಾಡಿದ್ದರು.ಆರು ಕಟ್ಟಡಗಳನ್ನು ಅಡಮಾನವಿಟ್ಟಿದ್ದರು. ಇದೀಗ ನಾವು ನಾಲ್ಕು ಕಟ್ಟಡಗಳನ್ನು ಬಿಡಿಸಿದ್ದು, ಬಿಬಿಎಂಪಿಯ ಆಡಳಿತವನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದೇವೆ. ಸ್ಲಂನಲ್ಲಿರುವ ಪ್ರತಿಯೊಂದು ಮನೆಗೆ ತಿಂಗಳಿಗೆ 10 ಸಾವಿರ ಲೀಟರ್ ಉಚಿತ ನೀರು ಪೂರೈಸುತ್ತಿದ್ದೇವೆ ಎಂದು ಅವರು ಹೇಳಿದರು.
ಆರ್ಥಿಕವಾಗಿ ಹಿಂದುಳಿದಿರುವವರಿಗೆ ಕಡಿಮೆ ಬೆಲೆಯಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಅಧಿಕಾರದಲ್ಲಿದ್ದಾಗ ಒಂದು ದಿನವೂ ಸ್ಲಂಗಳ ಕಡೆ ಮುಖಮಾಡದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನಿತರರು ಈಗ ಹೊಸ ಹಾಸಿಗೆ, ಕಮೋಡ್ ಹಾಕಿಸಿ ಸ್ಲಂಗಳಲ್ಲಿ ವಾಸ್ತವ್ಯ ಹೂಡುವ ನಾಟಕ ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಕೆ.ಆರ್.ಪುರ ಕ್ಷೇತ್ರದಲ್ಲಿ ಶಾಸಕ ಭೈರತಿ ಬಸವರಾಜ 104 ಕೊಲೆಗಳನ್ನು ಮಾಡಿಸಿದ್ದಾರೆ ಎಂದು ಕೇಂದ್ರ ಸಚಿವರೊಬ್ಬರು ಮಾನ, ಮರ್ಯಾದೆ ಇಲ್ಲದೆ ಸುಳ್ಳು ಆರೋಪ ಮಾಡುತ್ತಾರೆ. ಎನ್‌ಸಿಆರ್‌ಬಿ ಅಂಕಿ ಅಂಶಗಳನ್ನು ನೋಡಿದರೆ ಕಾಂಗ್ರೆಸ್‌ಗಿಂತ ಬಿಜೆಪಿ ಅವಧಿಯಲ್ಲೆ ಹೆಚ್ಚು ಕೊಲೆಗಳು ಆಗಿರುವುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಿಬಿಎಂಪಿಗೆ ಮುಖ್ಯಮಂತ್ರಿ 14 ಸಾವಿರ ಕೋಟಿ ರೂ.ಅನುದಾನ ನೀಡಿದ್ದಾರೆ. ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶಗಳನ್ನು ಹಂಚಿಕೆ ಮಾಡಿದ್ದೇವೆ. ಬಿಜೆಪಿ ಆಡಳಿತದಲ್ಲಿ ಕೇವಲ 6 ಕಿ.ಮೀ. ಪೂರ್ಣಗೊಂಡಿದ್ದ ಮೆಟ್ರೊ ಮಾರ್ಗ, ನಮ್ಮ ಅವಧಿಯಲ್ಲಿ 42 ಕಿ.ಮೀ.ಪೂರ್ಣಗೊಂಡಿದೆ. ಅಲ್ಲದೆ, ಎರಡನೆ ಹಂತದ ಕಾಮಗಾರಿಯು ಪ್ರಗತಿಯಲ್ಲಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಮಾತನಾಡಿ, ಬೆಂಗಳೂರು ನಗರದ ಕಸದ ಸಮಸ್ಯೆಯನ್ನು ನಿವಾರಿಸಲು ವಿಫಲವಾಗಿದ್ದ ಬಿಜೆಪಿ, ಮಂಡೂರು, ಮಳವಳ್ಳಿ ಪುರದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಮಾಡದೆ ಆಲ್ಲಿನ ಪ್ರದೇಶ ಹಾಳು ಮಾಡಿತ್ತು. ನಾವು ನಗರದ ಆರು ಕಡೆ ಕಸ ಸಂಸ್ಕರಣೆ ಘಟಕವನ್ನು ಆರಂಭಿಸಿದ್ದೇವೆ. ಕಲ್ಲಿನ ಕೋರೆಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಮಾಡುತ್ತಿದ್ದೇವೆ ಎಂದರು.
ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. 1.10 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆ ಮಾಡುತ್ತಿದ್ದೇವೆ. ಪಾಲಿಕೆ ವ್ಯಾಪ್ತಿಗೆ ಸೇರಿಸಲ್ಪಟ್ಟ 110 ಹಳ್ಳಿಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು 5500 ಕೋಟಿ ರೂ.ಗಳ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕಾವೇರಿ ಐದನೆ ಹಂತದ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. 13 ಸಾವಿರ ಕೋಟಿ ರೂ.ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಭೈರತಿ ಬಸವರಾಜ, ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಮೇಯರ್ ಕೆ.ಸಂಪತ್‌ರಾಜ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನೇಗೌಡ, ಮನೋಜ್ ಕುಮಾರ್, ಬಿಬಿಎಂಪಿ ಸದಸ್ಯರು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ರಾಮಮೂರ್ತಿನಗರದ ಕುವೆಂಪು ಆಟದ ಮೈದಾನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಚಾಲನೆ ನೀಡಿದ ಪಾದಯಾತ್ರೆಯು, ರಾಮಮೂರ್ತಿನಗರ, ಭೋವಿ ಕಾಲನಿ, ಕೌದೇನಹಳ್ಳಿ, ಟಿ.ಸಿ.ಪಾಳ್ಯ ಮಾರ್ಗವಾಗಿ ಕೆ.ಆರ್.ಪುರವರೆಗೆ ಸುಮಾರು 6 ಕಿ.ಮೀ.ವರೆಗೆ ಸಾಗಿತು