2019ರ ವಿಶ್ವಕಪ್‌ಗೆ ವಿಂಡೀಸ್ ತೇರ್ಗಡೆ

Update: 2018-03-21 18:41 GMT

ಹರಾರೆ, ಮಾ.21: ಇಲ್ಲಿ ನಡೆದ ಐಸಿಸಿ ವರ್ಲ್ಡ್‌ಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ 7ನೇ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರೂ, ಸ್ಕಾಟ್ಲೆಂಡ್ ವಿರುದ್ಧ ಐದು ರನ್‌ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿರುವ ವೆಸ್ಟ್‌ಇಂಡೀಸ್ ತಂಡ 2019ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

 ಹರಾರೆ ಸ್ಪೋಟ್ಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 199 ರನ್‌ಗಳ ಸವಾಲನ್ನು ಪಡೆದ ಸ್ಕಾಟ್ಲೆಂಡ್ 35.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಬಳಿಕ ಆಟ ಆರಂಭಗೊಳ್ಳಲಿಲ್ಲ. ಎರಡು ಬಾರಿ ವಿಶ್ವಕಪ್ ಜಯಿಸಿರುವ ವೆಸ್ಟ್ ಇಂಡೀಸ್ ತಂಡ ಡಕ್‌ವರ್ಥ್ ಲೂಯಿಸ್ ಆಧಾರದಲ್ಲಿ ವಿಜಯಿಯಾಗಿ ಇಂಗ್ಲೆಂಡ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಿತು.

 ಸ್ಕಾಟ್ಲೆಂಡ್ ತಂಡಕ್ಕೆ ಗೆಲುವಿಗೆ ಸುಲಭದ ಅವಕಾಶ ಇದ್ದರೂ, ಮಳೆಯಿಂದಾಗಿ ಮತ್ತು ಆರಂಭದಲ್ಲೇ ವಿಂಡೀಸ್‌ಗಿಂತ ಹೆಚ್ಚು ರನ್‌ರೇಟ್ ಕಾಯ್ದುಕೊಳ್ಳದ ಕಾರಣದಿಂದಾಗಿ ಗೆಲುವು ವಂಚಿತಗೊಂಡಿತು.

 ವಿಂಡೀಸ್‌ನ ಕೇಮರ್ ರೋಚ್ ಮತ್ತು ನಾಯಕ ಜೇಸನ್ ಹೋಲ್ಡರ್ ದಾಳಿಗೆ ಸಿಲುಕಿದ ಸ್ಕಾಟ್ಲೆಂಡ್ 6.1 ಓವರ್‌ಗಳಲ್ಲಿ 25 ರನ್ ಗಳಿಸುವಷ್ಟರಲ್ಲಿ ಅಗ್ರ ಸರದಿಯ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

 ವಿಕೆಟ್ ಕೀಪರ್ ಮ್ಯಾಥ್ಯೂ ಕ್ರಾಸ್(4), ನಾಯಕ ಕೈಲ್ ಕೊಟ್ಝೆರ್ (2) ಮತ್ತು ್ತ ಮೈಕಲ್ ಜೋನ್ಸ್(14) ವಿಕೆಟ್ ಕಳೆದುಕೊಂಡ ಸ್ಕಾಟ್ಲೆಂಡ್‌ಗೆ ನಾಲ್ಕನೆ ವಿಕೆಟ್‌ಗೆ ಕಾಲುಮ್ ಮಾಕ್ಲೀಡ್ ಮತ್ತು ರಿಚೀ ಬೆರಿಂಗ್ಟನ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಆಶ್ಲೇ ನರ್ಸ್ ಇವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಮಾಕ್ಲೀಡ್ 21ರನ್ ಮತ್ತು ರಿಚೀ ಬೆರಿಂಗ್ಟನ್ 33 ರನ್ ಗಳಿಸಿದರು. ಜಾರ್ಜ್ ಮುನ್ಸೀ (ಔಟಾಗದೆ 32) ಮತ್ತು ಮೈಕಲ್ ಲಿಯಾಸ್ಕ್(ಔಟಾಗದೆ 14) ಮುರಿಯದ ಜೊತೆಯಾಟದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಹೋರಾಟದಲ್ಲಿದ್ದಾಗ ಮಳೆ ಕಾಣಿಸಿಕೊಂಡಿತು. ಇದರಿಂದಾಗಿ ಅವರ ಹೋರಾಟ ಫಲ ನೀಡಲಿಲ್ಲ.

  ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡ ಸಫ್ಯಾನ್ ಶರೀಫ್ (27ಕ್ಕೆ 3),ಬ್ರಾಡ್ಲೇ ವೀಲ್(34ಕ್ಕೆ 3), ಮೈಕಲ್ ಲಿಯಾಸ್ಕ್(36ಕ್ಕೆ2), ಬೆರಿಂಗ್ಟನ್ (12ಕ್ಕೆ 1) ಮತ್ತು ಅಲ್ಸಾಡೈರ್ ಎವನ್ಸ್(58ಕ್ಕೆ 1) ದಾಳಿಗೆ ಸಿಲುಕಿ 48.4 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟಾಗಿತ್ತು.

ಎವಿನ್ ಲೆವಿಸ್(66) ಮತ್ತು ಮರ್ಲಾನ್ ಸಾಮ್ಯುಯೆಲ್ಸ್(51) ಮೂರನೇ ವಿಕೆಟ್‌ಗೆ 121 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ರನ್ ದಾಖಲಿಸಲು ನೆರವಾದರು. ಶರೀಫ್ ಆರಂಭಿಕ ದಾಂಡಿಗ ಕ್ರಿಸ್ ಗೇಲ್(0) ಮತ್ತು ಶಾಯ್ ಹೋಪ್(0) ಅವರಿಗೆ ಖಾತೆ ತೆರೆಯಲು ಅವಕಾಶ ನೀಡದೆ ಪೆವಿಲಿಯನ್‌ಗೆ ಅಟ್ಟಿದಾಗ ಲೆವಿಸ್ ಮತ್ತು ಸಾಮ್ಯುಯೆಲ್ಸ್ ಕ್ರೀಸ್‌ಗೆ ಆಗಮಿಸಿ ತಂಡವನ್ನು ಆಧರಿಸಿದರು.

ನಾಯಕ ಹೋಲ್ಡರ್(12), ರುವ್‌ಮಾನ್ ಪೊವೆಲ್ (15) ಮತ್ತು ಕಾರ್ಲೊಸ್ ಬ್ರಾಥ್‌ವೈಟ್(24) ಎರಡಂಕೆಯ ಕೊಡುಗೆ ನೀಡಿದರು.

  ಸ್ಕಾಟ್ಲೆಂಡ್‌ನ ಸಫ್ಯಾನ್ ಮುಹಮ್ಮದ್ ಶರೀಫ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್ ವಿವರ

►ವೆಸ್ಟ್‌ಇಂಡೀಸ್ 48.4 ಓವರ್‌ಗಳಲ್ಲಿ ಆಲೌಟ್ 198( ಲೆವಿಸ್ 66, ಸಾಮ್ಯುಯೆಲ್ಸ್ 51; ಶರೀಫ್ 27ಕ್ಕೆ 3, ವೀಲ್ 34ಕ್ಕೆ 3).

►ಸ್ಕಾಟ್ಲೆಂಡ್ 35.2 ಓವರ್‌ಗಳಲ್ಲಿ 125/5(ಬೆರಿಂಗ್ಟನ್ 33,ಜಾರ್ಜ್ ಮುನ್ಸೀ ಔಟಾಗದೆ 32; ರೋಚ್ 20ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News