ಶೇ.100ರಷ್ಟು ಆಧಾರ್ ದೃಢೀಕರಣ ಅಸಾಧ್ಯ ಎಂದ ಯುಐಡಿಎಐ

Update: 2018-03-22 17:00 GMT

ಹೊಸದಿಲ್ಲಿ, ಮಾ.22: ಆಧಾರ್ ಗುರುತುಪತ್ರ ಹೊಂದಿರದ ಕಾರಣಕ್ಕೆ ದೇಶದ ಯಾವುದೇ ಪ್ರಜೆ ಕೂಡಾ ಸಾಮಾಜಿಕ ಯೋಜನೆಗಳ ಪ್ರಯೋಜನ ಪಡೆಯುವುದರಿಂದ ವಂಚಿತರಾಗುವುದಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಆದರೆ ಆಧಾರ್ ಗುರುತುಪತ್ರದ ಶೇ.100ರಷ್ಟು ದೃಢೀಕರಣ ಅಸಾಧ್ಯ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

   ಆಧಾರ್ ದತ್ತಾಂಶ ಮಾಹಿತಿಯ ಸುರಕ್ಷತೆ ಕುರಿತು ಪ್ರಸ್ತಾವಿಸಿದ ಪಾಂಡೆ, ಆಧಾರ್ ದತ್ತಾಂಶಗಳನ್ನು ಗೂಢ ಲಿಪೀಕರಣ ನಡೆಸಲಾಗಿದ್ದು ಅತ್ಯಧಿಕ ಶಕ್ತಿಯ ಕಂಪ್ಯೂಟರ್‌ಗಳು ಕೂಡಾ ಇದರ ಒಂದು ಶಬ್ದ ಬೇಧಿಸುವುದು ಕೂಡಾ ಅಸಾಧ್ಯ ಎಂದರು. ಅಪರೂಪದ ಘಟನೆಯೊಂದರಲ್ಲಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ‘ಪವರ್‌ಪಾಯಿಂಟ್’ ಪ್ರಸ್ತುತಿಗೆ ಅವಕಾಶ ಮಾಡಿಕೊಟ್ಟರು. ಒಂದುವೇಳೆ ಬಯೊಮೆಟ್ರಿಕ್ ದೃಢೀಕರಣ ಪ್ರಕ್ರಿಯೆ ವಿಫಲವಾದರೆ ಆಗ ಏಕಕಾಲದ ಪಾಸ್‌ವರ್ಡ್ ಮುಂತಾದ ಇತರ ಪ್ರಕ್ರಿಯೆಗಳಿವೆ ಎಂದು ಪಾಂಡೆ ತಿಳಿಸಿದರು. ಜುಲೈ 1ರಿಂದ ಮುಖವನ್ನು ಗುರುತಿಸುವ ಮೂಲಕ ಆಧಾರ್ ದೃಢೀಕರಣ ಪ್ರಕ್ರಿಯೆ ಆರಂಭಿಸಲಾಗುವುದು ಎಂದವರು ತಿಳಿಸಿದರು.

 ಆಧಾರ್ ಗುರುತು ಕಾರ್ಡ್ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸದು ಎಂದು ಒಪ್ಪಿಕೊಂಡ ಪಾಂಡೆ, ಇಂತಹ ಸಂದರ್ಭದಲ್ಲಿ ಸಂಬಂಧಿತ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಆದರೆ ಈ ಹಿಂದೆ ಸರಕಾರದ ಯೋಜನೆಗಳ ಪ್ರಯೋಜವನ್ನು ಜನರಿಗೆ ನಿರಾಕರಿಸಿದ ಘಟನೆಗೆ ಯಾವುದೇ ಪುರಾವೆಯಿರಲಿಲ್ಲ. ಆದರೆ ಈಗ ಆಧಾರ್ ಪುರಾವೆಯಾಗಿದೆ ಎಂದರು.

ಯುಐಡಿಎಐಯಲ್ಲಿ ಬಳಸಲಾಗುವ ದಾಖಲಾತಿ ಸಾಪ್ಟ್‌ವೇರ್‌ನಲ್ಲಿ ‘ಡಿ-ಡುಪ್ಲಿಕೇಷನ್ ಸಾಫ್ಟ್‌ವೇರ್’(ಪುನರಾವರ್ತಿತ ಮಾಹಿತಿಯನ್ನು ಅಳಿಸಿ ಹಾಕುವ ಸಾಫ್ಟ್‌ವೇರ್) ಅಳವಡಿಸಲು ವಿಶ್ವದ ಮೂರು ಅಗ್ರ ಸಂಸ್ಥೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಸಾಫ್ಟ್‌ವೇರ್ ಯುಐಡಿಎಐಯ ಸರ್ವರ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇಂಟರ್‌ನೆಟ್ ಸಂಪರ್ಕ ಹೊಂದಿರುವುದಿಲ್ಲ . ಆದ್ದರಿಂದ ಆಧಾರ್ ಮಾಹಿತಿಯ ಸುರಕ್ಷತೆಯ ಬಗ್ಗೆ ಆತಂಕ ಬೇಡ ಎಂದವರು ಸ್ಪಷ್ಟಪಡಿಸಿದರು.

ಅಪರೂಪಕ್ಕೊಮ್ಮೆ ಇಬ್ಬರು ವ್ಯಕ್ತಿಗಳ ಬಯೊಮೆಟ್ರಿಕ್ ಮಾಹಿತಿಗಳು ಬಹುತೇಕ ಸಮಾನವಾಗಿರುತ್ತದೆ. ಆಗ ಅಧಿಕಾರಿಗಳು ‘ಡಿ-ಡುಪ್ಲಿಕೇಷನ್ ಸಾಫ್ಟ್‌ವೇರ್’ ಮೂಲಕ ಮಾಹಿತಿಯನ್ನು ಅಳಿಸಿಹಾಕುತ್ತಾರೆ ಎಂದು ಪಾಂಡೆ ವಿವರಿಸಿದರು. ಆಧಾರ್ ಗುರುತುಪತ್ರದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ಸರಕಾರಕ್ಕೆ ಆರು ಪ್ರಶ್ನೆಗಳನ್ನು ಕೇಳಿದೆ.

 ಆಧಾರ್ ಯೋಜನೆಗೆ ಒಳಪಡಲು ಬಯಸದ ನಾಗರಿಕರಿಗೆ ಪರ್ಯಾಯ ಕಾರ್ಯಕ್ರಮವನ್ನು ಸರಕಾರ ಜಾರಿಗೊಳಿಸಲು ಸಾಧ್ಯವೇ ಹಾಗೂ 2016ರಲ್ಲಿ ಆಧಾರ್ ಕಾಯ್ದೆಗೆ ಅನುಮೋದನೆ ದೊರೆಯುವ ಮೊದಲು ಸಂಗ್ರಹಿಸಿದ್ದ ದತ್ತಾಂಶ ಮಾಹಿತಿಗಳನ್ನು ನಾಶಗೊಳಿಸಲಾಗುವುದೇ ಎಂಬ ಪ್ರಶ್ನೆ ಇದರಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News