ಇದರ ಹಿಂದೆ ಭಾರತ ಸರಕಾರದ ದುಷ್ಟ ಶಕ್ತಿಗಳಿವೆ ಎಂದ ಕೆನಡ

Update: 2018-03-22 17:07 GMT
ಜಸ್ಟಿನ್ ಟ್ರೂಡೊ

ಟೊರಾಂಟೊ (ಕೆನಡ), ಮಾ. 22: ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊರ ಇತ್ತೀಚಿನ ಭಾರತ ಭೇಟಿಯ ವೇಳೆ ಅವರ ಕಾರ್ಯಕ್ರಮದಲ್ಲಿ ಖಾಲಿಸ್ತಾನಿ ಭಯೋತ್ಪಾದಕನೊಬ್ಬ ಕಾಣಿಸಿಕೊಂಡ ಘಟನೆಯ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ವಿವರಣೆ ನೀಡಲು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ನನ್ನು ಸಂಸದೀಯ ಸಮಿತಿಯೊಂದರ ಮುಂದೆ ಕರೆಸುವಂತೆ ಪ್ರತಿಪಕ್ಷ ಕನ್ಸರ್ವೇಟಿವ್ ಪಕ್ಷ ಕೆನಡ ಸರಕಾರವನ್ನು ಒತ್ತಾಯಿಸಿದೆ.

ಟ್ರೂಡೊರನ್ನು ಮುಜುಗರಕ್ಕೆ ಒಳಪಡಿಸುವುದಕ್ಕಾಗಿ ಭಾರತ ಸರಕಾರದಲ್ಲಿರುವ ‘ದುಷ್ಟ ಶಕ್ತಿಗಳು’ ಶಿಕ್ಷೆಗೊಳಗಾಗಿರುವ ಖಾಲಿಸ್ತಾನಿ ಭಯೋತ್ಪಾದಕ ಜಸ್ಪಾಲ್ ಅತ್ವಾಲ್‌ನನ್ನು ಅವರ ಕಾರ್ಯಕ್ರಮದಲ್ಲಿ ತಂದು ನಿಲ್ಲಿಸಿವೆ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಡೇನಿಯಲ್ ಜೀನ್ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

 ಈ ವಿಷಯಕ್ಕೆ ಸಂಬಂಧಿಸಿದ ನಿರ್ಣಯದ ಬಗ್ಗೆ ಸೂಚನೆ ನೀಡಲಾಗಿದೆ ಹಾಗೂ ಇದರ ಬಗ್ಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಚರ್ಚೆ ಹಾಗೂ ಮತದಾನ ನಡೆಯಲು ಕನ್ಸರ್ವೇಟಿವ್ ಪಕ್ಷ ಬಯಸಿದೆ ಎಂದು ಪ್ರತಿಪಕ್ಷ ನಾಯಕ ಆ್ಯಂಡ್ರೂ ಸ್ಕೀರ್ ಅವರ ವಕ್ತಾರ ಜೇಕ್ ಎನ್‌ರೈಟ್ ಹೇಳಿದ್ದಾರೆ.

ಪಂಜಾಬ್ ರಾಜ್ಯದ ಸಚಿವರೊಬ್ಬರು 1986ರಲ್ಲಿ ಕೆನಡಕ್ಕೆ ಭೇಟಿ ನೀಡಿದ್ದಾಗ ಅವರನ್ನು ಕೊಲ್ಲಲು ಪ್ರಯತ್ನ ನಡೆಸಿದ ಪ್ರಕರಣದಲ್ಲಿ, ಅತ್ವಾಲ್ ದೋಷಿಯಾಗಿದ್ದಾನೆ ಎಂಬುದಾಗಿ 1987ರಲ್ಲಿ ನ್ಯಾಯಾಲಯವೊಂದು ತೀರ್ಪು ನೀಡಿತ್ತು.

ಫೆಬ್ರವರಿ 22ರಂದು ಹೊಸದಿಲ್ಲಿಯಲ್ಲಿ ಟ್ರೂಡೊಗಾಗಿ ಕೆನಡದ ರಾಯಭಾರಿ ಏರ್ಪಡಿಸಿದ್ದ ಔತಣಕೂಟದ ಆಮಂತ್ರಿತರ ಪಟ್ಟಿಯಲ್ಲಿ ಅತ್ವಾಲ್‌ನ ಹೆಸರೂ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News