2019ರ ವಿಶ್ವಕಪ್: ಅರ್ಹತೆ ಗಿಟ್ಟಿಸಿಕೊಂಡ ಅಫ್ಘಾನಿಸ್ತಾನ

Update: 2018-03-23 17:11 GMT

ಹರಾರೆ, ಮಾ.23: ಐರ್ಲೆಂಡ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ರೋಚಕವಾಗಿ ಮಣಿಸಿದ ಅಫ್ಘಾನಿಸ್ತಾನ 2019ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
 ಶುಕ್ರವಾರ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ನಿರ್ಣಾಯಕ ಸೂಪರ್-6 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ ರಶೀದ್ ಖಾನ್(3-40) ಹಾಗೂ ದೌಲತ್ ಝದ್ರಾನ್(2-54) ಕರಾರುವಾಕ್ ದಾಳಿಗೆ ತತ್ತರಿಸಿ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಲಷ್ಟೇ ಶಕ್ತವಾಯಿತು. ಐರ್ಲೆಂಡ್ ಪರ ಆರಂಭಿಕ ಆಟಗಾರ ಸ್ಟಿರ್ಲಿಂಗ್(55), ಕೆವಿನ್ ಒ’ಬ್ರಿಯಾನ್(41) ಹಾಗೂ ನೀಲ್ ಒ’ಬ್ರಿಯಾನ್(36) ಒಂದಷ್ಟು ಹೋರಾಟ ನೀಡಿದರು.

ಗೆಲ್ಲಲು 210 ಗುರಿ ಪಡೆದ ಅಫ್ಘಾನಿಸ್ತಾನ 49.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ರೋಚಕ ಜಯ ಸಾಧಿಸಿತು. ಈ ಮೂಲಕ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ 10ನೇ ತಂಡವಾಗಿ ತೇರ್ಗಡೆಯಾಯಿತು. ವಿಂಡೀಸ್ ಈಗಾಗಲೇ ಅರ್ಹತಾ ಟೂರ್ನಿಯಲ್ಲಿ ಜಯ ಸಾಧಿಸಿ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ಮೊದಲ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿದ ಮುಹಮ್ಮದ್ ಶಹಝಾದ್(54,50 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಗುಲ್ಬದಿನ್ ನೈಬ್(45,91 ಎಸೆತ, 3 ಬೌಂಡರಿ) ಅಫ್ಘಾನ್ ರನ್ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟರು. 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 32 ರನ್ ಸೇರಿಸಿದ ಅಸ್ಘರ್ ಸ್ಟಾನಿಕ್‌ಝೈ(ಔಟಾಗದೆ 39) ಹಾಗೂ ನಜಿಬುಲ್ಲಾ ಝದ್ರಾನ್(17) ತಂಡಕ್ಕೆ 5 ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

ಅಫ್ಘಾನ್ ಟೂರ್ನಿಯ ಮೊದಲ 3 ಪಂದ್ಯಗಳಲ್ಲಿ ಸೋತು ಕಳಪೆ ಆರಂಭ ಪಡೆದಿತ್ತು. ಆ ನಂತರ ಸತತ 4 ಪಂದ್ಯಗಳನ್ನು ಜಯಿಸಿ 10ನೇ ತಂಡವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಫಲವಾಗಿದೆ.
ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಶಹಝಾದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News