ವಿಶ್ವ ದಾಖಲೆ ಸರಿಗಟ್ಟಿದ ದ.ಆಫ್ರಿಕ ದಾಂಡಿಗ ಡಿಯನ್ಎಲ್ಗರ್

Update: 2018-03-23 18:21 GMT

ಕೇಪ್‌ಟೌನ್, ಮಾ.23: ದಕ್ಷಿಣ ಆಫ್ರಿಕದ ಆರಂಭಿಕ ಬ್ಯಾಟ್ಸ್ ಮನ್ ಡಿಯನ್ ಎಲ್ಗರ್ ಮೂರನೇ ಬಾರಿ ಪೂರ್ತಿ ಇನಿಂಗ್ಸ್ ಬ್ಯಾಟಿಂಗ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟವಾದ ಶುಕ್ರವಾರ ದಕ್ಷಿಣ ಆಫ್ರಿಕ ತಂಡ ಮೊದಲ ಇನಿಂಗ್ಸ್‌ನಲ್ಲಿ 311 ರನ್‌ಗೆ ಆಲೌಟಾಗಿದ್ದು, ಎಲ್ಗರ್ ಔಟಾಗದೆ 141 ರನ್ ಗಳಿಸಿದರು. 434 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಎಲ್ಗರ್ 284 ಎಸೆತಗಳನ್ನು ಎದುರಿಸಿ 20 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಈ ಹಿಂದೆ ವೆಸ್ಟ್‌ಇಂಡೀಸ್‌ನ ಡೆಸ್ಮಂಡ್ ಹೆನ್ಸ್ ಟೆಸ್ಟ್ ಇನಿಂಗ್ಸ್‌ನಲ್ಲಿ ಮೂರು ಬಾರಿ ಔಟಾಗದೆ ಉಳಿದಿದ್ದರು.

ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಕೂಡ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದರು. ದಕ್ಷಿಣ ಆಫ್ರಿಕದ ಕೊನೆಯ ಇಬ್ಬರು ದಾಂಡಿಗರಾದ ರಬಾಡ ಹಾಗೂ ಮೊರ್ಕೆಲ್ ಕ್ಯಾಚ್ ಪಡೆದ ಸ್ಮಿತ್ ಇನಿಂಗ್ಸ್‌ನಲ್ಲಿ ಒಟ್ಟು 5 ಕ್ಯಾಚ್ ಪಡೆದ ಸಾಧನೆ ಮಾಡಿದರು.

ಸ್ಮಿತ್ ಈ ಸಾಧನೆಯ ಮೂಲಕ ಇತರ 10 ಆಟಗಾರರೊಂದಿಗೆ ದಾಖಲೆ ಹಂಚಿಕೊಂಡರು. ವಿವಿ ರಿಚರ್ಡ್‌ಸನ್(1935-36)ಬಳಿಕ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಎರಡನೇ ಆಟಗಾರ ಎನಿಸಿಕೊಂಡರು.

 8 ವಿಕೆಟ್‌ಗಳ ನಷ್ಟಕ್ಕೆ 266 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ದಕ್ಷಿಣ ಆಫ್ರಿಕ ಪರ ಎಲ್ಗರ್ ಹಾಗೂ ರಬಾಡ(22) 9ನೇ ವಿಕೆಟ್‌ಗೆ 50 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 300ರ ಗಡಿ ದಾಟಿಸಿದರು. ಲಿಯೊನ್ ಈ ಜೋಡಿಯನ್ನು ಬೇರ್ಪಡಿಸಿದರು. ಆಸ್ಟ್ರೇಲಿಯದ ಪರ ಕಮ್ಮಿನ್ಸ್(4-74) ಯಶಸ್ವಿ ಬೌಲರ್ ಎನಿಸಿಕೊಂಡರು. ಹೇಝಲ್‌ವುಡ್(2-59) ಹಾಗೂ ಲಿಯೊನ್(2-43) ತಲಾ ಎರಡು ವಿಕೆಟ್ ಪಡೆದಿದ್ದಾರೆ.

300 ವಿಕೆಟ್ ಪೂರೈಸಿದ ಮೊರ್ಕೆಲ್

ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕದ ಐದನೇ ಬೌಲರ್ ಎನಿಸಿಕೊಂಡಿರುವ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಐತಿಹಾಸಿಕ ಸಾಧನೆ ಮಾಡಿದರು. ಈಗ ನಡೆಯುತ್ತಿರುವ ಟೆಸ್ಟ್ ಸರಣಿ ಕೊನೆಗೊಂಡ ತಕ್ಷಣ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಘೋಷಿಸಿರುವ ಮೊರ್ಕೆಲ್ 2ನೇ ದಿನದಾಟದಲ್ಲಿ ಅತ್ಯುತ್ತಮ ಸ್ಪೆಲ್ ಎಸೆದು ಮೈಲುಗಲ್ಲು ತಲುಪಿದರು. ಇನಿಂಗ್ಸ್‌ನ 35ನೇ ಓವರ್‌ನ 3ನೇ ಎಸೆತದಲ್ಲಿ ಶಾನ್ ಮಾರ್ಷ್ ವಿಕೆಟ್ ಕಬಳಿಸುವುದರೊಂದಿಗೆ ಮೊರ್ಕೆಲ್ 300 ವಿಕೆಟ್ ಪೂರೈಸಿದರು. ಡೇಲ್ ಸ್ಟೇಯ್ನ್, ಶಾನ್ ಪೊಲಾಕ್, ಮಖಾಯ ಎನ್‌ಟಿನಿ ಹಾಗೂ ಅಲನ್ ಡೊನಾಲ್ಡ್ ಬಳಿಕ ಈ ಸಾಧನೆ ಮಾಡಿದ ಆಫ್ರಿಕದ 5ನೇ ಬೌಲರ್ ಎನಿಸಿಕೊಂಡರು.

ಆಸ್ಟ್ರೇಲಿಯ 245/9

ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯ ತಂಡ ಎರಡನೇ ದಿನದಾಟದಂತ್ಯಕ್ಕೆ 245 ರನ್‌ಗೆ 9 ವಿಕೆಟ್ ಕಳೆದುಕೊಂಡಿದೆ. ದಕ್ಷಿಣ ಆಫ್ರಿಕದ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 66 ರನ್ ಹಿನ್ನಡೆಯಲ್ಲಿದೆ.

 ಆಸೀಸ್ ಪರ ಆರಂಭಿಕ ಆಟಗಾರ ಬ್ಯಾಂಕ್ರಾಫ್ಟ್(77) ಅಗ್ರ ಸ್ಕೋರರ್ ಎನಿಸಿಕೊಂಡರು. ಇನ್ನೋರ್ವ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 30 ರನ್ ಗಳಿಸಿ ಔಟಾದರು. ಬ್ಯಾಂಕ್ರಾಫ್ಟ್-ವಾರ್ನರ್ ಮೊದಲ ವಿಕೆಟ್‌ಗೆ 45 ರನ್ ಸೇರಿಸಿದರು. ಉಸ್ಮಾನ್ ಖ್ವಾಜಾ(5), ನಾಯಕ ಸ್ಟೀವ್ ಸ್ಮಿತ್(5), ಮಿಚೆಲ್ ಮಾರ್ಷ್(5), ಶಾನ್ ಮಾರ್ಷ್(26)ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಆಸ್ಟ್ರೇಲಿಯ 175 ರನ್‌ಗೆ 8 ವಿಕೆಟ್ ಕಳೆದುಕೊಂಡಿತ್ತು. ಆಗ ಟಿಮ್ ಪೈನ್(ಔಟಾಗದೆ 33) ಹಾಗೂ ಲಿಯೊನ್(47)9ನೇ ವಿಕೆಟ್‌ಗೆ 66 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 241ಕ್ಕೆ ತಲುಪಿಸಿದರು.

ದಕ್ಷಿಣ ಆಫ್ರಿಕದ ಪರ ಮೊರ್ನೆ ಮೊರ್ಕೆಲ್(4-87), ರಬಾಡ(3-81) ಹಾಗೂ ಫಿಲ್ಯಾಂಡರ್(2-26)9 ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News